Advertisement

ಸೂರ್ಯನಗರಿಗೆ ಬಂದ ತಿಮ್ಮಪ್ಪ

11:08 AM Nov 25, 2019 | Naveen |

ಕಲಬುರಗಿ: ಸಂಜೆ ಐದು ಗಂಟೆಯಾಗುತ್ತಲೇ ಎಲ್ಲ ರಸ್ತೆಗಳು ನೂತನ ಮಹಾವಿದ್ಯಾಲಯ ಮೈದಾನ ಸೇರುವಂತೆ ಕಂಡು ಬಂದವಲ್ಲದೇ, ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಸೇರಿ ವೆಂಕಟೇಶ್ವರ ನಾಮಸ್ಮರಣೆ ಜಪ ಮಾಡುತ್ತಿದ್ದರು.

Advertisement

ರವಿವಾರ ಸಂಜೆ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವ ನೆರೆದವರ ಕಣ್ಮನ ಸೆಳೆಯಿತು. ಜಿಲ್ಲೆಯ ಜನತೆ ತಿಮ್ಮಪ್ಪನ ದರ್ಶನ ತಿರುಪತಿಗೆ ತೆರಳುವ ಬದಲು, ಇದ್ದಲ್ಲೇ ದರ್ಶನ ಪಡೆಯುವಂತೆ ಆಗಲು ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯ ವತಿಯಿಂದ ಆಯೋಜಿಸಲಾಗಿದ್ದ “ಶ್ರೀನಿವಾಸ ಕಲ್ಯಾಣೋತ್ಸವ’ ಅದ್ಧೂರಿಯಾಗಿ, ಐತಿಹಾಸಿಕವಾಗಿ ನಡೆಯಿತು.

ತಿರುಮಲ ದೇಗುಲ ಕಂಡಂತೆ ಅನುಭವ: ಕಲ್ಯಾಣೋತ್ಸವ ಆರಂಭದಲ್ಲಿ ವೇದಿಕೆ ದ್ವಾರ ತೆಗೆದಾಗ ಸಾಕ್ಷಾತ್‌ ತಿರುಪತಿ ದ್ವಾರ ತೆರೆದ ಅನುಭವವಾಯಿತು. ಎಲ್ಲರೂ ತಿರುಪತಿ ವೆಂಕಟೇಶ್ವರ ಸನ್ನಿಧಾನದಲ್ಲೇ ಇದ್ದೇವೆ ಎನ್ನುವಂತ ಭಕ್ತಿ ಭಾವ ಮೂಡಿತು. ಇದಕ್ಕೆ ಪೂರಕ ಎನ್ನುವಂತೆ ಘಂಟೆ ನಾದ ಮೊಳಗಿತು. ದ್ವಾರ ತೆಗೆದಾಗ ನೆರೆದ ಸಾವಿರಾರು ಭಕ್ತರು ಭಕ್ತಿ-ಭಾವದಿಂದ “ವೆಂಕಟರಮಣ ಗೋವಿಂದ’ ಎಂದು ಉದ್ಘೋಷಿಸಿ ನಮಸ್ಕರಿಸಿದರು. ನಂತರ ವೈಕುಂಠ ಪತಿಯ ದರ್ಶನ ಭಾಗ್ಯ ಸಿಕ್ಕಿತು ಎನ್ನುವ ಧನ್ಯತೆ ಮೆರೆದರು.

ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಅನೇಕ ಸೇವೆಗಳಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಪ್ರಮುಖವಾಗಿದೆ. ತಿರುಪತಿ-ತಿರುಮಲ ಕ್ಷೇತ್ರದಲ್ಲಿ ನಿತ್ಯವೂ ಕಲ್ಯಾಣೋತ್ಸವ ನಡೆಯುತ್ತದೆ. ದೂರದ ತಿರುಪತಿಗೆ ಹೋಗಿ ಕಲ್ಯಾಣೋತ್ಸವ ಮಾಡಿಸುವುದು ಕಷ್ಟದ ಕೆಲಸ. ಹೀಗಾಗಿ ಈ ಭಾಗದ ಭಕ್ತರ ನಾಡಿಗೆ ವೆಂಕಟೇಶ್ವರ ಸ್ವಾಮಿಯನ್ನು ಬರಮಾಡಿಕೊಂಡು ಕಲ್ಯಾಣೋತ್ಸವ ಆಯೋಜಿಸಿರುವುದಕ್ಕೆ ಭಕ್ತರು ಘೋಷಣೆಗಳ ಮೂಲಕ ಹರ್ಷ ವ್ಕಕ್ತಪಡಿಸಿದರು. ದರ್ಶನಕ್ಕೆ ಬಂದ ಭಕ್ತರಿಗೆ ಲಡ್ಡು, ಗೋವಿಂದನಾಮಾವಳಿ, ಭಗವದ್ಗೀತೆ ಪುಸ್ತಕದ ಜತೆಗೆ ಪ್ರಸಾದ ನೀಡಲಾಯಿತು.

ಕಾರ್ಯಕ್ರಮದ ಆಯೋಜಕರ ಸಂಜೀವ ಗುಪ್ತಾ ದಂಪತಿ ಪುಣ್ಯಾಹ ವಾಚನ ಮಾಡಿದರು. ನಂತರ ಶ್ರೀನಿವಾಸ, ಪದ್ಮಾವತಿ ದೇವಿಯರ ಸ್ನಾನ, ಮಂಗಲ್ಯ ಧಾರಣೆ ಸೇರಿದಂತೆ ಸಂಪ್ರದಾಯ ಪೂರ್ವಕ ವಿವಾಹ ನೆರವೇರಿತು. ಒಟ್ಟಾರೆ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಶ್ರೀನಿವಾಸ ಮತ್ತು ಭೂದೇವಿ, ಶ್ರೀದೇವಿ ಉತ್ಸವ ಮೂರ್ತಿಗಳ ಕಲ್ಯಾಣ ನೆರವೇರಿತು.

Advertisement

ಟಿಟಿಡಿ ಪ್ರಧಾನ ಅರ್ಚಕ ಶ್ರೀ ವೇಣುಗೋಪಾಲ ದಿಕ್ಷೀತ್‌, ಶ್ರೀ ಅರ್ಜುನದಾಸ ಮಹಾರಾಜ, ಕೃಷ್ಣಾದಾಸ ಮಹಾರಾಜ ಸೇರಿದಂತೆ 50ಕ್ಕೂ ಹೆಚ್ಚು ವೈದಿಕ ವೃಂದದವರು ಕಲ್ಯಾಣೋತ್ಸವ ನೇತೃತ್ವ ವಹಿಸಿದ್ದರು. ಶರಣಬಸವೇಶ್ವರ ಮಹಾಸಂಸ್ಥಾನದ ಮಾತಾಜಿ ದಾಕ್ಷಾಯಣಿ ಎಸ್‌. ಅಪ್ಪ, ಶಾಸಕರಾದ ಬಿ.ಜಿ.
ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಡಾ| ಅವಿನಾಶ ಜಾಧವ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶರಣಕುಮಾರ ಮೋದಿ, ಮುಖಂಡರಾದ ಸತೀಶ ವಿ. ಗುತ್ತೇದಾರ, ಉಮೇಶ ಶೆಟ್ಟಿ, ಶ್ರೀಕಾಮತ್‌ ಲಾಹೋಟಿ, ರವಿ ಲಾತೂರಕರ್‌, ಶೇಷಾದ್ರಿ ಕುಲಕರ್ಣಿ, ಅರುಣಕುಮಾರ ಪಾಟೀಲ, ಎಚ್‌ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ರಾಮಾಚಾರ್ಯ ಅವಧಾನಿ, ಮೋಹನಭಟ್ಟ ಜೋಶಿ, ಗೋವಿಂದ ರಾಟಿ, ಭರತ ಗುಪ್ತಾ, ಡಾ| ವೇಣುಗೋಪಾಲ ಮಂತ್ರಿ, ಮಂಜುಳಾ ಗುಪ್ತಾ, ಡಾ| ಶಿವರಾಜ ಪಾಟೀಲ, ಡಾ| ವೀರೇಶ ಸಲಗರ, ಡಾ| ರಶ್ಮಿ ಸಲಗರ, ಬಾಬುರಾವ ಶೇರಿಕಾರ ಮುಂತಾದವರಿದ್ದರು.

ಪಾರ್ಕಿಂಗ್‌ ವ್ಯವಸ್ಥೆ: ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಆಗಮಿಸಿದ್ದ ಭಕ್ತರ ಕಾರು, ಬೈಕ್‌ಗಳ ಪಾರ್ಕಿಂಗ್‌ಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಶರಣಬಸವೇಶ್ವರ ದೇವಸ್ಥಾನ ಆವರಣ, ಶರಣಬಸವೇಶ್ವರ ಕಾಲೇಜು, ಅಪ್ಪ ಪಬ್ಲಿಕ್‌ ಸ್ಕೂಲ್‌, ಖೂಬಾ ಕಲ್ಯಾಣ ಮಂಟಪ, ಕಲ್ಯಾಣಿ ಪೆಟ್ರೋಲ್‌ ಪಂಪ್‌ ಆವರಣ, ರೋಟರಿ ಸ್ಕೂಲ್‌, ವೀರಶೈವ ಕಲ್ಯಾಣ ಮಂಟಪದ ಸಮೀಪದ ಸ್ಥಳವಲ್ಲದೇ, ಕಲ್ಯಾಣೋತ್ಸವ ಸ್ಥಳಕ್ಕೆ ಹಿರಿಯರು, ಅಂಗವಿಕಲರು, ಅಸಹಾಯಕರನ್ನು ಕರೆತರಲು ಪಾರ್ಕಿಂಗ್‌ ಸ್ಥಳಗಳಿಂದ ಉಚಿತ ಕಾರು ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next