ಕಲಬುರಗಿ: ಕಲ್ಯಾಣ ಕರ್ನಾಟಕವು ಕಲಾವಿದರ ತವರೂರು. ಒಂದೊಂದು ಊರಿನದ್ದು ಒಂದೊಂದು ಕಥೆ. ಹಾಗೆಯೇ ಸಗರನಾಡಿನ ಸುರಪುರ ಗರುಡಾದ್ರಿ ಚಿತ್ರಕಲೆಯೂ ಒಂದು ಎಂದು ಮುಂಬೈನ ಸರ್| ಜೆ.ಜೆ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೆ„ಡ್ ಆರ್ಟ್ ಗ್ಯಾಲರಿ ವಿಮರ್ಶಕ ಪ್ರೊ| ಗಜಾನನ ಶೇಪಾಲ ಹೇಳಿದರು.
ಮುಂಬೈ ಠಾಣೆಯಲ್ಲಿರುವ ಗ್ರೀನ್ ಸ್ಟ್ರೋಕ್ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿರುವ ಅರವಿಂದ ಟೊಣಪೆ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದ ತನ್ನ ಅಭಿವ್ಯಕ್ತಿಗೆ ಆರಿಸಿಕೊಳ್ಳುವ ಬಣ್ಣಗಳ ಛಾಯೆಗಳು, ಅವನು ನೋಡುವ ಕಣ್ಣಿನ ಅನುಭವ, ಅಭ್ಯಾಸ ಮನಸ್ಸಿನ ಪಕ್ವತೆ, ಭಾವನೆಗಳ ತೀವ್ರತೆ ಅವಲಂಬಿಸಿದ್ದಾರೆ ಎಂದರು.
ತಾಂತ್ರಿಕವಾಗಿ ಈ ಕಲಾವಿದನ ಕಲಾಕೃತಿಗಳು ವಿವಿಧ ಬಣ್ಣಗಳ ದ್ರವ್ಯಗಳನ್ನು ತನ್ನ ಅವಕಾಶಗಳಲ್ಲಿ ಹರಡಿಕೊಂಡು, ಕಲಾಸೃಷ್ಟಿಯ ಮೂಲ ಅಂಶಗಳಾದ ಅವಕಾಶ, ಚಲನೆ, ಮೈವಳಿಕೆ ಮತ್ತು ಆಕಾರ ಹಾಗೂ ಕಲಾವಿದನ ತೀವ್ರ ತುಡಿತಗಳ ಸಂಯೋಗದಿಂದ ಉಂಟಾಗುವ ರಸದ್ರೇಕಿತತೆ ಕೊಡುತ್ತಿವೆ ಎಂದರು.
ಸಗರನಾಡಿನ ಕಲಾವಿದರು ಗುಡ್ಡ ಬೆಟ್ಟಗಳ ನಡುವೆಯೇ ಕಲೆ ಹಾಗೂ ಕಲಾಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ನಡೆಸಿದ್ದಾರೆ. ಈ ಕಲಾವಿದ ಸುರಪುರದ ಗರುಡಾದ್ರಿ ಕಲೆಯನ್ನು ತನ್ನಲ್ಲಿ ಆಸ್ವಾದಿಸಿ, ಅಂತರಂಗದ ಅಭಿವ್ಯಕ್ತಿಯನ್ನು ತನ್ನ ಬಣ್ಣದ ರೇಖೆಗಳಲ್ಲಿ ಬಳಸಿಕೊಂಡು ಉತ್ತಮ ಕಲಾಕೃತಿ ರಚಿಸಿದ್ದಾರೆ. ನಶಿಸಿ ಹೋಗುವಂತಹ ಕುದುರೆ ಸವಾರಿಯನ್ನು, ಟಾಂಗಾಗಳನ್ನು ತಮ್ಮ ಕಲಾಕೃತಿಯಲ್ಲಿ ಅಭಿವ್ಯಕ್ತಿಪಡಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಗ್ರೀನ್ ಸ್ಟ್ರೋಕ್ ಆರ್ಟ್ ಗ್ಯಾಲರಿಯ ಸಂಸ್ಥಾಪಕ ಸಿಬಬ್ರತ್ ರಾಯ್ ಹೇಳಿದರು.ಡಿ. 17ರ ವರೆಗೆ ಬೆಳಗ್ಗೆ
11ರಿಂದ ಸಂಜೆ 6:30ರ ವರೆಗೆ ಚಿತ್ರಕಲೆ ಪ್ರದರ್ಶನಗೊಳ್ಳಲಿದೆ.