ಕಲಬುರಗಿ: ವೇಗದಲ್ಲಿ ಬೆಳೆಯುತ್ತಿರುವ ಕಲಬುರಗಿ ಮಹಾನಗರದಲ್ಲಿ ಮನೋರಂಜನಾ (ಥೀಮ್) ಪಾರ್ಕ್ ಸ್ಥಾಪನೆ ಆಗಬೇಕೆಂಬ ನಿಟ್ಟಿನಲ್ಲಿ ನಗರದ ದರಿಯಾಪುರ-ಕೋಟನೂರ ಡಿ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಬಡಾವಣೆಯಲ್ಲಿ ನಿರ್ಮಿಸಲಾಗುತ್ತಿರುವ ರಾಜೀವಗಾಂಧಿ ಥೀಮ್ ಪಾರ್ಕ್ ಅರ್ಧಕ್ಕೆ ನಿಂತಿದ್ದು, ಸಂಪೂರ್ಣ ಹಾಳಾಗುತ್ತಿದೆ.
Advertisement
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಬಡಾವಣೆ ಮಧ್ಯ ಭಾಗದಲ್ಲಿ ಮಹಾನಗರ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಳೆದ ಐದು ವರ್ಷಗಳ ಹಿಂದೆ ವಿಶಾಲವಾದ 18 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ಸ್ಥಾಪಿಸಲು ಮುಂದಾಗಲಾಗಿದೆ. 3.50 ಕೋಟಿ ರೂ. ಖರ್ಚು ಮಾಡಿ ಪೂರಕ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ ಅನುದಾನ ಸಿಗದೇ ಇರುವುದರಿಂದ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ಈಗಾಗಲೇ ನಿರ್ಮಿಸಲಾದ ಕಟ್ಟಡಗಳು ಸಂಪೂರ್ಣ ಹಾಳಾಗುತ್ತಾ ಸಾಗಿದ್ದು, 3.50 ಕೋಟಿ ರೂ.ಗಳನ್ನು ನೀರಲ್ಲಿ ಹೋಮ ಮಾಡಿದಂತಾಗಿದೆ.
Related Articles
Advertisement
ಎಚ್‌ಕೆಆರ್‌ಡಿಬಿಯಿಂದ ಅನುದಾನ: ಈ ಮುಂಚಿನ ಎಚ್‌ಕೆಆರ್‌ಡಿಬಿ ಹಾಗೂ ಈಗಿನ ಕೆಕೆಆರ್‌ಡಿಬಿಯಿಂದ 3.50 ಕೋಟಿ ರೂ. ಅನುದಾನ ಥೀಮ್ ಪಾರ್ಕ್ ನಿರ್ಮಾಣಕ್ಕೆ ನೀಡಲಾಗಿದೆ. ಪಾರ್ಕ್ ಸಲುವಾಗಿ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ನಾಲ್ಕು ದಿಕ್ಕಿನಲ್ಲೂ ಗೇಟ್‌ಗಳನ್ನು ಅಳವಡಿಸಲಾಗಿದೆ. ನಡುವೆ ಕಾರಂಜಿ ದೀಪ ಹಾಗೂ ಮೂರು ಕಟ್ಟಡಗಳನ್ನು ಅರ್ಧಕ್ಕೆ ನಿರ್ಮಿಸಿ ಕೈ ಚೆಲ್ಲಲಾಗಿದೆ. ಥೀಮ್ ಸುತ್ತಲೂ ಟ್ರ್ಯಾಕ್ ಸಹ ಕಳಪೆಯಿಂದ ನಿರ್ಮಾಣವಾಗಿದೆ.
ಸುತ್ತಮುತ್ತಲಿನ ನೂರಾರು ಸಾರ್ವಜನಿಕರು ಬೆಳಗ್ಗೆ ಹಾಗೂ ಸಾಯಂಕಾಲ ವಾಕಿಂಗ್ ಮಾಡುತ್ತಿರುತ್ತಾರೆ. ಇಂದಲ್ಲ ನಾಳೆ ಕಾಮಗಾರಿ ಶುರುವಾಗಬಹುದೆಂದು ಸುತ್ತಮುತ್ತಲಿನ ವಾಸಿಗಳು ಬಲವಾಗಿ ನಂಬಿದ್ದರು. ಆದರೆ ಈಗ ಪಾರ್ಕ್ ಆಗುವುದಿಲ್ಲ ಎನ್ನುವುದನ್ನರಿತು ಹೋರಾಟಕ್ಕೆ ಇಳಿಯಲು ಮುಂದಾಗಿದ್ದಾರೆ. ಪಾರ್ಕ್‌ನ ದುಸ್ಥಿತಿ, ಕಳಪೆ ಕಾಮಗಾರಿ ಹಾಗೂ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಲು ಸಂಘ ರಚಿಸಲಾಗಿದೆ. ಪಾರ್ಕ್ ಉಳಿಸಬೇಕೆಂಬ ಕೂಗು ಬಲವಾಗತೊಡಗಿದೆ.