ಕಲಬುರಗಿ: ಬಹು ದಿನಗಳ ಕನಸಾಗಿರುವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾನುಷ್ಠಾನಕ್ಕೆ ತರುವಂತೆ ಸಂಸದ ಡಾ| ಉಮೇಶ ಜಾಧವ ಗುರುವಾರ ನವದೆಹಲಿಯಲ್ಲಿ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿಗೆ ಮನವಿ ಸಲ್ಲಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾನುಷ್ಠಾನಕ್ಕೆ ತರುವುದು ಅಗತ್ಯವಾಗಿದೆ. ಸಮಯ ವಿಳಂಬ ಮಾಡದೇ ಶೀಘ್ರವೇ ವಿಭಾಗೀಯ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಂಡು ಮನವಿಗೆ ಸ್ಪಂದಿಸಬೇಕು ಎಂದು ಕೋರಿದ್ದಾರೆ.
ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ನಿಟ್ಟಿನಲ್ಲಿ ಹಲವಾರು ವರದಿಗಳು ನೀಡಿವೆಯಲ್ಲದೇ, ಪಕ್ಕದ ರಾಜ್ಯಗಳಿಗೆ ಹರಿದು ಹಂಚಿ ಹೋಗಿರುವ ಕಲಬುರಗಿ ವಿಭಾಗದ ಭಾಗವನ್ನು ಒಗ್ಗೂಡಿಸಿ ವಿಭಾಗ ಕಾರ್ಯಾನುಷ್ಠಾನಕ್ಕೆ ತರಬೇಕೆಂದು ಸಚಿವರಲ್ಲಿ ಒತ್ತಾಯಿಸಿದ್ದಾರೆ.
ಒಪ್ಪಂದ: ಕಲಬುರಗಿಯಲ್ಲಿನ ಇಎಸ್‌ಐ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಕಾರ್ಡುದಾರರಿಗೆ ವೈದ್ಯಕೀಯ ಸೌಲಭ್ಯ ನೀಡುವ ಪ್ರಮಾಣೀಕೃತ ನಿರ್ವಹಣಾ ಚಾಲನಾ ಕಾರ್ಯಕ್ಕೆ ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹೀಗಾಗಿ ಶೀಘ್ರದಲ್ಲೇ ಇಎಸ್‌ಐ ಆಸ್ಪತ್ರೆಯಲ್ಲಿ ಕಲಬುರಗಿ ಭಾಗದ ಸರ್ವ ಜನತೆಗೆ ವೈದ್ಯಕೀಯ ಸೇವೆ ದೊರಕಲಿದೆ ಎಂದು ಸಂಸದ ಡಾ| ಜಾಧವ ತಿಳಿಸಿದ್ದಾರೆ.
ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜೀಮ್ಸ್) ಆಸ್ಪತ್ರೆಯಲ್ಲಿ ಈಗ ವೈದ್ಯಕೀಯ ಸೇವೆ ಸುಧಾರಣೆ ತಂದಿರುವುದಕ್ಕೆ ತಾವು ಪದೇ-ಪದೇ ಭೇಟಿ ನೀಡಿದ್ದಕ್ಕೆ ಸಾಧ್ಯವಾಗಿದೆ. ಐಎಎಸ್ ಅಧಿಕಾರಿಯಾಗಿರುವ ಕಲಬುರಗಿ ಈಶಾನ್ಯ ವಲಯ ಶಿಕ್ಷಣ ಆಯುಕ್ತಾಲಯ ಅಪರ ಆಯುಕ್ತ ನಲಿನಿ ಅತುಲ್ ಅವರನ್ನು ಈಗ ಸರ್ಕಾರ ಜಿಮ್ಸ್‌ಗೆ ಆಡಳಿತಾಧಿಕಾರಿಯನ್ನಾಗಿ ನಿಯೋಜಿಸಿದೆ ಎಂದು ತಿಳಿಸಿದ್ದಾರೆ. ದೀಪಾವಳಿ ಪ್ರಯುಕ್ತ ಬೆಂಗಳೂರಿನಿಂದ-ಕಲಬುರಗಿಗೆ ವಿಶೇಷ ರೈಲು ಓಡಾಟಕ್ಕೆ ಹಸಿರು ನಿಶಾನೆ ದೊರೆತಿದೆ. ಅದೇ ರೀತಿ ಮುಸ್ಲಿಂರು ಭೋಪಾಲಕ್ಕೆ ತೆರಳಿ ಇಜ್ತಾಮಾದಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲು ಕಲ್ಯಾಣ ಕರ್ನಾಟಕ ಭಾಗದಿಂದ ವಿಶೇಷ ರೈಲೊಂದನ್ನು ಓಡಿಸುವಂತೆ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.