ಕಲಬುರಗಿ: ಕೃಷಿ ಇಲಾಖೆಯಲ್ಲಿ (ರೈತ ಅನುವುಗಾರರು) ತಾಂತ್ರಿಕ ಉತ್ತೇಜಕರಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 6500 ಜನರಿಗೆ ಮಾಸಿಕ 10000ರೂ. ಗೌರವ ಧನ ಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭವಾಗಿದ್ದು, ಧರಣಿಗೂ ಮುನ್ನ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಶ್ರಮಜೀವಿಗಳ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಎಸ್. ಹಿರೇಮಠ ನೇತೃತ್ವದಲ್ಲಿನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ನಂತರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಗೌರವಧನಕ್ಕೆ ಆಗ್ರಹಿಸಿ ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು. ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಅನೇಕ ಬಾರಿ ಭೇಟಿ ಮಾಡಿ ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಟ್ಟರೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಕೇವಲ ಹುಸಿ ಭರವಸೆ ಕೊಡುತ್ತಿದೆ. ಮಾ.5ರಂದು ರಾಜ್ಯದ ಬಜೆಟ್ ನಲ್ಲಿಯಾದರೂ ಮಾಸಿಕ 10000ರೂ. ಗೌರವ ಧನ ಕೊಡುವ ದಿಸೆಯಲ್ಲಿ ಒತ್ತಡ ಹೇರಲು ಹೋರಾಟ ರೂಪಿಸಲಾಗಿದೆ ಎಂದರು.
ಕೃಷಿ ಇಲಾಖೆಯಲ್ಲಿ ಸದ್ಯ ಯಾವುದೇ ಸಹಾಯಕರ ಹುದ್ದೆ ಇಲ್ಲ. ಈ ಕುರಿತು ಸ್ವತಃ ಕೃಷಿ ಅ ಧಿಕಾರಿಗಳೇ ಪ್ರತಿಭಟನೆ ಮಾಡಿ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಸುಮಾರು 40 ಲಕ್ಷ ರೈತರ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ತಾಂತ್ರಿಕ ಉತ್ತೇಜಕರನ್ನು ಸರ್ಕಾರ ಕೇವಲ ಕಮೀಷನ್ ಮೇಲೆ ಕೆಲಸ ತೆಗೆದುಕೊಳ್ಳುತ್ತಿದ್ದು, ಯಾವುದೇ ಭತ್ಯೆ ಹಾಗೂ ಸೌಲಭ್ಯ ಇಲ್ಲದೇ ದುಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಅನುವುಗಾರರ (ತಾಂತ್ರಿಕ ಉತ್ತೇಜಕರು) ಕೆಲಸದ ಅವ ಧಿ ಕೇವಲ ಒಂದು ವರ್ಷಕ್ಕೆ ನಿಗದಿಪಡಿಸಿ, ಅವರಿಗೆ ಯಾವುದೇ ಸೌಲಭ್ಯ ಕೊಡದೇ ಕಮೀಷನ್ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿರುವುದರಿಂದ ಅವರೆಲ್ಲ ಶೋಷಣೆಗೆ ಒಳಗಾಗಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಮಸ್ಯೆಗೆ ಸ್ಪಂದಿಸಿಲ್ಲ. ಕೃಷಿ ಸಚಿವ ಬಿ.ಸಿ. ಪಾಟೀಲ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ದೇವಪ್ಪ ಗುಡ್ಡಾನೋರ, ಮಹಿಬೂಬ್ ಬೇವಿನಗಿಡ, ಶೇಖರಪ್ಪ ಅಸೂಟಿ, ಮುಖೇಶ, ಲಕ್ಷ್ಮೀಶ ಎಲ್., ಬಸವರಾಜ ಕೆ.ಆರ್, ಮಲ್ಲೇಶ, ರಿಯಾಜುದ್ದೀನ್ ಮಂಗಲಗಿ, ಗಫೂರ್ ಕೆ. ಮಸಳಿ, ಜಗದೀಶ ಗಿರಕಿ ಮುಂತಾದವರು ಭಾಗವಹಿಸಿದ್ದರು.