ಕಲಬುರಗಿ: ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಹಲವು ರಸ್ತೆಗಳು ಜಲಾವೃತ ಆಗಿರುವುದರಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) 85 ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಕಳೆದ ಮೂರ್‍ನಾಲ್ಕು ದಿನಗಳಿಂದ ಪ್ರತಿ ದಿನ 13ರಿಂದ 14 ಲಕ್ಷ ರೂ. ನಷ್ಟ ಉಂಟಾಗಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಗೆ ನಿತ್ಯವೂ ನೀರು ಹರಿಸಲಾಗುತ್ತಿದೆ. ಪರಿಣಾಮ ರಾಜ್ಯದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ನೀರು ಬಿಡಲಾಗುತ್ತಿದ್ದು, ಹೈದ್ರಾಬಾದ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿವೆ. ಜತೆಗೆ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳು ಮಹಾ ಪ್ರವಾಹಕ್ಕೆ ನಲುಗಿವೆ. ಆದ್ದರಿಂದ ಈ ಭಾಗಗಳಲ್ಲಿ ಎನ್‌ಇಕೆಆರ್‌ಟಿಸಿ ವ್ಯಾಪ್ತಿಯ ವಿಜಯಪುರ ಸೇರಿದಂತೆ ಏಳು ಜಿಲ್ಲೆಗಳಿಂದ ಪ್ರಯಾಣಿಸಬೇಕಿದ್ದ ಹಲವು ಬಸ್‌ಗಳ ಸಂಚಾರ ರದ್ದು ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ರಾಯಚೂರು-ಕಲಬುರಗಿ ರಾಜ್ಯ ಹೆದ್ದಾರಿಯ ಕೊಳ್ಳೂರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುತ್ತಿದ್ದ 35 ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ರಾಯಚೂರಿನಿಂದ ದೇವದುರ್ಗ ಮೂಲಕ ಶಹಾಪುರ, ಕಲಬುರಗಿಗೆ ಬರುವ ಬಸ್‌ಗಳು ಜಾಲಹಳ್ಳಿ, ತಿಂಥಣಿ ಮಾರ್ಗವಾಗಿ ಅನಿವಾರ್ಯತೆ ಎದುರಾಗಿದೆ. ಆದರೆ, ರಾಯಚೂರು, ಯಾದಗಿರಿ, ಕಲಬುರಗಿ ಮಧ್ಯೆ ಸಾಕಷ್ಟು ರೈಲುಗಳ ಸಂಚಾರ ಇರುವುದರಿಂದ ಬಸ್ ಅವಲಂಬಿತ ಪ್ರಯಾಣಿಕರನ್ನು ಹೊರತು ಪಡಿಸಿ ಹೆಚ್ಚಿನ ಸಮಸ್ಯೆಯಾಗಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ-ಕೊಲಾØಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಚರಿಸುತ್ತಿದ್ದ 10 ಬಸ್‌ಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಅಷ್ಟೇ ಅಲ್ಲದೇ, ಮಹಾರಾಷ್ಟ್ರದ ಕೊಲಾØಪುರ, ರತ್ನಗಿರಿ, ಮಿರಜ್, ಸಾಂಗ್ಲಿ, ಇಚಲಕರಂಜಿ, ಪುಣೆಗೆ ತೆರಳಬೇಕಿದ್ದ ಸುಮಾರು 20 ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ.
ಕೃಷ್ಣಾ ನದಿ ಪಾತ್ರದ ಅನೇಕ ಗ್ರಾಮಗಳಿಗೆ ನೀರು ನುಗ್ಗಿರುವುದರಿಂದ ವಿಜಯಪುರ ಜಿಲ್ಲೆಯ ವ್ಯಾಪ್ತಿಯೊಳಗೆ ಸಂಚರಿಸುತ್ತಿದ್ದ 80 ಬಸ್‌ಗಳು ಹಾಗೂ ರಾಯಚೂರು ಜಿಲ್ಲೆಯ ವ್ಯಾಪ್ತಿಯೊಳಗೆ 20 ಬಸ್‌ಗಳ ಸಂಚಾರ ಸ್ಥಗಿತವಾಗಿದೆ. ಇದರಲ್ಲಿ ಹೊರ ಭಾಗಗಳಿಗೆ ಸಂಚರಿಸುತ್ತಿದ್ದ ಬಸ್‌ಗಳು ಸೇರಿವೆ. ಇನ್ನು, ಧರ್ಮಸ್ಥಳ ಅಥವಾ ಮಂಗಳೂರಿಗೆ ಪ್ರತಿ ಜಿಲ್ಲಾ ಕೇಂದ್ರದಿಂದ ದಿನವೂ ಒಂದೇ ಬಸ್ ಪ್ರಯಾಣಿಸುತ್ತಿದ್ದು, ಧರ್ಮಸ್ಥಳ ಭಾಗದಲ್ಲೂ ಮಳೆ ಸುರಿಯುತ್ತಿರುವುದರಿಂದ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
51 ಸಾವಿರ ಕಿ.ಮೀ. ಕಡಿಮೆ: ಪ್ರವಾಹದಿಂದಾಗಿ ಬಸ್‌ಗಳ ಸ್ಥಗಿತಗೊಳಿಸಿರುವುದರಿಂದ ಈಶಾನ್ಯ ಸಾರಿಗೆ ಬಸ್‌ಗಳ ಒಟ್ಟು ಸಂಚಾರದಲ್ಲಿ 51 ಸಾವಿರ ಕಿ.ಮೀ ದೂರದ ಸಂಚಾರ ಕಡಿಮೆಯಾಗಿದೆ. ಆದರೆ, ಎಲ್ಲೂ ಯಾವುದೇ ರೀತಿಯ ಹಾನಿಯಾಗಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಸೇತುವೆ ಹಾಗೂ ತೆಗ್ಗು-ದಿಣ್ಣೆ ಪ್ರದೇಶಗಳಲ್ಲಿ ಕಟ್ಟೆಚ್ಚರದಿಂದ ಇರಲು ಮತ್ತು ಅಪಾಯದ ಸ್ಥಳದಲ್ಲಿ ಬಸ್‌ಗಳನ್ನು ಇಳಿಸದಂತೆ ಚಾಲಕರು, ನಿರ್ವಾಹಕರಿಗೆ ಸೂಚಿಸಲಾಗಿದೆ. ಮಳೆ ಮತ್ತು ಪ್ರವಾಹದ ನೀರು ಇಳಿದರೆ ಮತ್ತೆ ಬಸ್‌ಗಳ ಸಂಚಾರ ಯಥಾ ಪ್ರಕಾರ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರವಾಹ ಹಿನ್ನೆಲೆಯಲ್ಲಿ ಎನ್‌ಇಕೆಆರ್‌ಟಿಸಿ ವಾಪ್ತಿಯ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯಪುರ ವಿಭಾಗಗಳಿಂದ ಬೇರೆ-ಬೇರೆ ನಗರಗಳಿಗೆ ಸಂಚರಿಸುತ್ತಿದ್ದ 85 ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಪ್ರತಿದಿನ ಸಂಸ್ಥೆಗೆ ಪ್ರತಿ ದಿನ 13ರಿಂದ 14 ಲಕ್ಷ ರೂ. ನಷ್ಟ ಸಂಭವಿಸುತ್ತಿದೆ. ನೀರು ಹರಿಯುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಹಾನಿಯಾಗಿಲ್ಲ.
•
ಸಂತೋಷಕುಮಾರ,
ಮುಖ್ಯ ಸಂಚಾರ ವ್ಯವಸ್ಥಾಪಕ, ಎನ್‌ಇಕೆಆರ್‌ಟಿಸಿ