Advertisement

Kalaburagi; ಜಯದೇವ ಆಸ್ಪತ್ರೆ ಕಟ್ಟಡ ವೀಕ್ಷಿಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ್

03:23 PM Oct 29, 2023 | Team Udayavani |

ಕಲಬುರಗಿ: ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಡಿಸೆಂಬರ್ 8ರ ವೇಳೆಗೆ ಮುಕ್ತಾಯಗೊಳಿಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

Advertisement

ಭಾನುವಾರ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜನವರಿ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆಸ್ಪತ್ರೆ ಉದ್ಘಾಟಿಸುವ ಉದ್ದೇಶವಿದೆ. ಹೀಗಾಗಿ, ಡಿಸೆಂಬರ್‌ ಮೊದಲ ವಾರದಲ್ಲಿ ಕಟ್ಟಡ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಹಲವು ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ. ಡಾ.ಸಿ.ಎನ್. ಮಂಜುನಾಥ್ ಅವರು ಈಗಾಗಲೇ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಟೆಂಡರ್ ಕರೆದು ಅಂತಿಮ ಮಾಡಿದ್ದಾರೆ. ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಕೆಐಯುಡಿಎಫ್‌ಸಿ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಆಸ್ಪತ್ರೆಗೆ ಮೂರು ಕ್ಯಾಥ್‌ಲ್ಯಾಬ್‌ಗಳು ಅಗತ್ಯವಿದೆ. ಅವುಗಳನ್ನು ಅಳವಡಿಸುವ ಕೆಲಸವೂ ನಡೆಯಲಿದೆ. ವಿದ್ಯುತ್‌, ಜನರೇಟರ್, ಎಸ್ಟಿಪಿ ಘಟಕವನ್ನೂ ನಿರ್ಮಿಸಲಾಗುವುದು ಎಂದರು.

371 (ಜೆ) ಕಲಂ ಮೂಲಕ ಕೆಕೆಆರ್‌ಡಿಬಿ ರಚನೆಯಾಗಿದೆ. ಅದರ ನೆನಪಿಗಾಗಿ ಆಸ್ಪತ್ರೆಯಲ್ಲಿ 371 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮಂಡಳಿಯು 182 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದು, ಒಟ್ಟಾರೆ 236 ಕೋಟಿ ರೂ.ಹಣ ಬೇಕಾಗಲಿದೆ. ಉಳಿದ ಹಣವನ್ನೂ ಮಂಡಳಿ ಬಿಡುಗಡೆ ಮಾಡಲಿದೆ ಎಂದು ಭರವಸೆ ನೀಡಿದರು.

Advertisement

ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಾತನಾಡಿ, ’ನಾನು ಮಂಡಳಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನವೇ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ಕರೆ ಮಾಡಿ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಗೆ ನೆರವು ನೀಡಲು ಕೋರಿದ್ದರು. ಇಡೀ ಆಸ್ಪತ್ರೆ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಮಂಡಳಿಯೇ ಭರಿಸುತ್ತಿದೆ. ಮತ್ತೊಂದು ಕಂತಿನ ಹಣ ಸೋಮವಾರ ಬಿಡುಗಡೆ ಮಾಡಲಾಗುವುದು’ ಎಂದರು.

ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ’ಈ ಆಸ್ಪತ್ರೆ ಉದ್ಘಾಟನೆಯಾದ ಬಳಿಕವೂ ಉಪಕರಣಗಳ ಸ್ಥಳಾಂತರ ಹಾಗೂ ಜೋಡಣೆಗೆ 5-6 ತಿಂಗಳು ಬೇಕಾಗುತ್ತದೆ. ಆದರೆ, ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಗಮನ ಹರಿಸಲಾಗುವುದು. ಸಿಬ್ಬಂದಿ ನೇಮಕಾತಿ ಪ್ರಕ್ರಿಯೂ ನಡೆದಿದೆ. 125 ಐಸಿಯು ಬೆಡ್‌, 200 ಸಾಮಾನ್ಯ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

‘ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಆರಂಭವಾದ ಬಳಿಕ ನಾಲ್ಕು ಲಕ್ಷ ಹೊರರೋಗಿಗಳು ಚಿಕಿತ್ಸೆ ಪಡೆದಿದ್ದು, 30 ಸಾವಿರ ರೋಗಿಗಳು ಆಂಜಿಯೊಪ್ಲಾಸ್ಟಿಗೆ ಒಳಗಾಗಿದ್ದಾರೆ. 1 ಸಾವಿರ ರೋಗಿಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ವಿವರಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಕಲಬುರಗಿ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಬಾಬುರಾವ್, ಕಾಂಗ್ರೆಸ್ ಮುಖಂಡರಾದ ಶರಣು ಭೂಸನೂರ, ನೀಲಕಂಠರಾವ್ ಮೂಲಗೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next