ಕಲಬುರಗಿ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಮಂಗಳವಾರ ಜಿಲ್ಲೆಯ ಖಾಸಗಿ ಶಾಲೆಗಳನ್ನು ಬಂದ್ ಮಾಡಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಹಲವು ಶಾಲೆಗಳ ಮುಖ್ಯಸ್ಥರು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಪತ್ರ ಸಲ್ಲಿಸಿದರು.
ಖಾಸಗಿ ಶಾಲೆಗಳ ಬೇಡಿಕೆಗಳನ್ನು ಈಡೇರಿಸಲು ಪ್ರಥಮ ಹಂತವಾಗಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ. ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ, ಸರ್ಕಾರದ ಮೇಲೆ ಒತ್ತಡ ಹೇರಲು ಡಿ.24ರಂದು ಬೆಂಗಳೂರು ಚಲೋಗೆ ಕರೆ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಸುನೀಲ ಹುಡಗಿ, ಖಜೂರಿಯ ಕೋರಣೇಶ್ವರ ಮಠದ ಮುರುಘರಾಜೇಂದ್ರ ಮಹಾ ಸ್ವಾಮೀಜಿ, ಆಳಂದ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಬಸವರಾಜ ದಿಗ್ಗಾವಿ, ಚಂದು ಪಾಟೀಲ, ಅರುಣಕುಮಾರ, ಬಳ್ಳಾರಿಯ ರಾಮಮೋಹನ್, ಯಾದಗಿರಿಯ ವಿಜಯ ರಾಠೊಡ, ಬೀದರನ ಬಸವರಾಜ ಧರಶೆಟ್ಟಿ, ಪ್ರಕಾಶ ಗುಡಿಮನಿ, ಮಸ್ತಾನ್ ಬಿರಾದಾರ, ಚನ್ನಬಸಪ್ಪ ಗಾರಂಪಳ್ಳಿ, ನೌಶಾದ್ ಇರಾನಿ, ಕಾಶೀನಾಥ ಮಡಿವಾಳ, ಭೀಮಶೆಟ್ಟಿ ಮುರಡಾ, ಮಹಾಂಂತಯ್ಯ ಹಿರೇಮಠ ಹಾಗೂ ಸಾವಿರಾರು ಜನರು ಪಾಲ್ಗೊಂಡಿದ್ದರು.