Advertisement

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

11:44 AM May 04, 2024 | Team Udayavani |

ಉದಯವಾಣಿ ಸಮಾಚಾರ
ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ|ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರ ರಾಜ್ಯವಲ್ಲದೇ ರಾಷ್ಟ್ರ ಗಮನ ಸೆಳೆದಿದೆ. ಕಾಂಗ್ರೆಸ್‌-ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ಗೆ ಗೆಲುವು ಅನಿವಾರ್ಯವಾದರೆ, ಬಿಜೆಪಿ ಮರಳಿ ಗೆಲ್ಲುವ ತವಕ ಹೊಂದಿದೆ. 2009 ಹಾಗೂ 2014ರಲ್ಲಿ ಸತತ 2 ಸಲ ಈ ಕ್ಷೇತ್ರದಿಂದ ಚುನಾಯಿತರಾಗಿದ್ದ ಡಾ|ಖರ್ಗೆ 2019ರಲ್ಲಿ ಪರಾಭವ ಗೊಂಡಿದ್ದರು. ಈ ಬಾರಿ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಹಾಲಿ ಸಂಸದ ಡಾ|ಉಮೇಶ ಜಾಧವ್‌ ಪುನರಾಯ್ಕೆ ಬಯಸಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

Advertisement

14 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 63 ವಯಸ್ಸಿನ ರಾಧಾಕೃಷ್ಣ ದೊಡ್ಡಮನಿ ನೇರವಾಗಿ ರಾಜಕೀಯ ಮಾಡಿದವರಲ್ಲ. ಹಿನ್ನೆಲೆಯಲ್ಲೇ ಮಾವನ ಚುನಾವಣೆಗೆ ಸಹಾಯ ಮಾಡಿದವರು. ಇದೇ ಮೊದಲ ಬಾರಿಗೆ ನೇರವಾಗಿ ಅಖಾಡಕ್ಕಿಳಿದಿದ್ದಾರೆ. 2019ರ ಚುನಾವಣೆಯಲ್ಲಿ ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್‌, ಮೂರರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದರು. ಈಗ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಗುರುಮಿಠಕಲ್‌ ಕ್ಷೇತ್ರದಲ್ಲಿ ಜೆಡಿಎಸ್‌ನ ಶಾಸಕರು ಬಿಟ್ಟರೆ ಉಳಿದ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ಖರ್ಗೆ ಬದಲು ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅಭ್ಯರ್ಥಿಯಾಗಿದ್ದರೂ ಚುನಾವಣೆ ಡಾ|ಖರ್ಗೆ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಖರ್ಗೆ ಕ್ಷೇತ್ರಾ ದ್ಯಂತ ಸತತವಾಗಿ ಸುತ್ತಾಡಿ ಬಿರುಸಿನ ಪ್ರಚಾರ ಕೈಗೊಂಡಿ ರುವುದು ಜತೆಗೆ ಭಾವನಾತ್ಮಕವಾಗಿ ಮಾತನಾಡಿರುವುದೇ ಇದಕ್ಕೆ ಸಾಕ್ಷಿ. ಚುನಾವಣೆ ದಿನಾಂಕ ಘೋಷಣೆ ದಿನದಂದೇ ಪ್ರಧಾನಿ ಮೋದಿ ಚುನಾ ವಣಾ ಕಹಳೆ ಮೊಳಗಿಸಿ ಹೋಗಿದ್ದಾರೆ. ಗುರುಮಿಠಕಲ್‌, ಜೇವರ್ಗಿ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಯಾಗಿ ಕೆಲಸ ನಡೆದಿದೆಯಾದರೂ ಪರಿಣಾಮ ಫ‌ಲಿತಾಂಶ ನಂತರವೇ ಗೊತ್ತಾಗುತ್ತದೆ.

ಡಾ| ಜಾಧವ್‌ ಏಕಾಂಗಿ!: 2019ರ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಡಾ|ಜಾಧವ್‌ ಜತೆಗಿದ್ದ ಹಿಂದುಳಿದ ವರ್ಗಗಳ ನಾಯಕರಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಮಾಜಿ ಶಾಸಕ ವಿಶ್ವನಾಥ
ಪಾಟೀಲ್‌ ಹೆಬ್ಬಾಳ ಈಗ ಕಾಂಗ್ರೆಸ್‌ಗೆ ಸೇರಿದ್ದಾರೆ. ಕಳೆದ ಸಲ ಖರ್ಗೆ ಅವರನ್ನು ಸೋಲಿಸುತ್ತೇವೆ ಎಂದಿದ್ದವರು ಈಗ ಜಾಧವ್‌ ಅವರನ್ನು ಸೋಲಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಅಭ್ಯರ್ಥಿ ಡಾ| ಜಾಧವ್‌ ಒಬ್ಬರೇ ಕ್ಷೇತ್ರಾದ್ಯಂತ ಹಗಲಿರುಳು ಸುತ್ತು ಹಾಕುತ್ತಿದ್ದಾರೆ.

ಡಾ| ಖರ್ಗೆಯೇ ಅಭ್ಯರ್ಥಿ: ಅಳಿಯ ರಾಧಾಕೃಷ್ಣ ಅಭ್ಯರ್ಥಿಯಾಗಿದ್ದರೂ ಡಾ|ಖರ್ಗೆ ಅವರೇ ಅಭ್ಯರ್ಥಿ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಡಾ|ಖರ್ಗೆ ಅಫ‌ಜಲಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಈ ಸಲ ಕಾಂಗ್ರೆಸ್‌ಗೆ ಮತ ಹಾಕದಿದ್ದರೂ ತಾವು ಸತ್ತಾಗ ಮಣ್ಣಿಗಾದರೂ ಬನ್ನಿ’ ಎಂದು ಭಾವನಾತ್ಮಕವಾಗಿ ಮಾತನಾಡಿ ಸಂಚಲನ ಮೂಡಿಸಿದ್ದಾರೆ. ಇಲ್ಲಿ ಲಿಂಗಾಯತ ಸಮುದಾಯದವರೇ ಹೆಚ್ಚಿದ್ದಾರೆ. ಅನಂತರದ ಸ್ಥಾನದಲ್ಲಿ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು ಹಾಗೂ ಕೋಲಿ ಇತರೆ ಸಮುದಾಯ ದವರಿದ್ದಾರೆ. ಬಿಜೆಪಿ ಲಿಂಗಾಯತ, ಕೋಲಿ ಹಾಗೂ ಲಂಬಾಣಿ ಮತಗಳನ್ನು ಮತ್ತು ಕಾಂಗ್ರೆಸ್‌ ಅಲ್ಪಸಂಖ್ಯಾತ, ಕುರುಬ ಹಾಗೂ ಪರಿಶಿಷ್ಟ ಜಾತಿ ಮತಗಳನ್ನು ನೆಚ್ಚಿಕೊಂಡಿದೆ. ಲಿಂಗಾಯತ ಮತಗಳು ಯಾರಿಗೆ ಹೆಚ್ಚು ಒಲಿಯುತ್ತವೆಯೋ ಅವರು ಗೆಲುವಿನ ನಗೆ ಬೀರಲಿದ್ದಾರೆ.

Advertisement

ಡಾ|ಉಮೇಶ ಜಾಧವ್‌ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ
ಸಾಮರ್ಥ್ಯ
1)ಪ್ರಧಾನಿ ಮೋದಿ ನಾಮಬಲ
2)ಕೊರೊನಾ ಸಮಯದಲ್ಲಿ ಸ್ಪಂದನೆ-ಅಭಿವೃದ್ಧಿ ಕಾರ್ಯ
3)ಸರಳ ವ್ಯಕ್ತಿತ್ವ, ಜನರ ಸಮಸ್ಯೆಗೆ ಸ್ಪಂದಿಸುವ ಗುಣ

ಕೊರೊನಾ ವೇಳೆ ವೈದ್ಯನಾಗಿ ಸ್ಪಂದಿಸಿದ ತೃಪ್ತಿ ಇದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಇಲ್ಲಿಯವರೆಗೆ ಕಲಬುರಗಿಯಿಂದಲೇ ಬೆಂಗಳೂರಿಗೆ ರೈಲು ಓಡಿರಲಿಲ್ಲ. ನನ್ನ ಅವಧಿ ಯಲ್ಲಿ ಇದು ಸಾಕಾರಗೊಂಡಿದೆ. ಹತ್ತಾರು ಅಭಿವೃದ್ಧಿ ಕಾರ್ಯಗಳು ಕಣ್ಣೆದುರಿಗಿವೆ.
●ಡಾ|ಉಮೇಶ ಜಾಧವ್‌, ಬಿಜೆಪಿ ಅಭ್ಯರ್ಥಿ

ರಾಧಾಕೃಷ್ಣ ದೊಡ್ಡಮನಿಕಾಂಗ್ರೆಸ್‌ ಅಭ್ಯರ್ಥಿ
ಸಾಮರ್ಥ್ಯ
1)ಮಾವ ಖರ್ಗೆ ಎಐಸಿಸಿ ಅಧ್ಯಕ್ಷರ ನಾಮಬಲ
2)ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಲ
3)ಎಲ್ಲ ನಾಯಕ ರೊಂದಿಗೆ ಉತ್ತಮ ಸಂಪರ್ಕ

ಮಾಜಿ ಸಿಎಂಗಳಾದ ವೀರೇಂದ್ರ ಪಾಟೀಲ್‌, ಧರ್ಮಸಿಂಗ್‌, ಡಾ|ಮಲ್ಲಿಕಾರ್ಜುನ ಖರ್ಗೆ ಅವರಂಥ ನಾಯಕರು ಗೆದ್ದ ಕ್ಷೇತ್ರವಿದು. ಸಮಗ್ರ ಅಭಿವೃದ್ಧಿ, ಬದಲಾವಣೆಗಾಗಿ ಕ್ಷೇತ್ರದ ಜನ ಕೈಹಿಡಿಯುತ್ತಾರೆಂಬ ದೃಢ ವಿಶ್ವಾಸವಿದೆ.
●ರಾಧಾಕೃಷ್ಣ ದೊಡ್ಡಮನಿ, ಕಾಂಗ್ರೆಸ್‌ ಅಭ್ಯರ್ಥಿ

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next