ಶಹಾಬಾದ: ಕಲಬುರಗಿಯಲ್ಲಿ ನಡೆದ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿಕ್ಕೆ ನಾಡಿನ ಸಮಸ್ತ ಜನತೆಯೇ ಮೂಲ ಕಾರಣ. ಇದರಲ್ಲಿ ನನ್ನದಾದ ಯಾವುದೇ ಪಾತ್ರ ಇಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಸಿಂಪಿ ಹೇಳಿದರು.
ಬುಧವಾರ ಕಸಾಪ ಕಲಬುರಗಿ ಗ್ರಾಮೀಣ ವತಿಯಿಂದ ನಗರದ ಕನ್ನಡ ಭವನದಲ್ಲಿ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದ್ದಕ್ಕೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ಜನರ ಆಶೀರ್ವಾದದಿಂದ ಕಸಾಪ ಅಧ್ಯಕ್ಷನಾದೆ. ನನಗೆ ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಜಿಲ್ಲಾಧಿಕಾರಿಗಳು ಹಗಲು-ರಾತ್ರಿ ಎನ್ನದೇ ಕಾರ್ಯ ನಿರ್ವಹಿಸಿದ್ದಾರೆ. ಉಸ್ತುವಾರಿ ಸಚಿವರು, ಶಾಸಕರು, ಅಧಿ ಕಾರಿ ವರ್ಗದವರು, ಪೌರಕಾರ್ಮಿಕರು, ಪೊಲೀಸ್ ಇಲಾಖೆ, ಮಾಧ್ಯಮ ವರ್ಗ ಸೇರಿದಂತೆ ಕಾಣದ ಕೈಗಳು ಹಾಗೂ ಸಮಸ್ತ ನಾಡಿನ ಜನತೆ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಇಲ್ಲಿಯವರೆಗೆ ನಡೆದ 84 ಸಮ್ಮೇಳನಗಳಿಗಿಂತ ಅಭೂತಪೂರ್ವ ಯಶಸ್ಸು ಕಂಡಿರುವುದಕ್ಕೆ ಕನ್ನಡಾಭಿಮಾನಿಗಳೇ ಕಾರಣ. ಕಲಬುರಗಿಯಲ್ಲಿ ನಡೆಯುವ ಸಮ್ಮೇಳನ ರಾಜ್ಯದಲ್ಲೇ ಮಾದರಿಯಾಗಬೇಕು. ಜಿಲ್ಲೆಗೆ ಹೆಸರು ತರುವಂಥ ಕೆಲಸ ಮಾಡಬೇಕು ಎನ್ನುವ ಗುರಿ ಹೊಂದಿದ್ದೆ. ಅದು ಎಲ್ಲರ ಸಾಮೂಹಿಕ ಪ್ರಯತ್ನದಿಂದ ನೆರವೇರಿದೆ ಎಂದರು.
ಸಮ್ಮೇಳನ ಎಂದರೆ ಟೀಕೆಗಳು, ಅಪಸ್ವರಗಳು ಕೇಳಿ ಬರುವುದು ಸಹಜ. ಯಾವುದನ್ನು ಹಚ್ಚಿಕೊಳ್ಳದೇ ಕಲಬುರಗಿ ಜಿಲ್ಲೆ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ. ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದೆ. ಈ ಮಣ್ಣಿನ ನೆಲ, ಕಡಕೋಳ ಮಡಿವಾಳವಪ್ಪ ಅವರ ಶಕ್ತಿಯಿಂದ ಸಮ್ಮೇಳನ ಯಶಸ್ವಿಯಾಗಿ ಐತಿಹಾಸಿಕ ಪುಟಗಳಲ್ಲಿ ಸೇರುವಂಥ ಕೆಲಸವನ್ನು ಮಹಾಜನತೆ ಮಾಡಿದೆ ಎಂದು ಹೇಳಿದರು.
ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್ ಮಾತನಾಡಿ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ, ಇತಿಹಾಸದ ಪುಟಗಳಲ್ಲಿ ಸೇರುವಂತಾಗಲು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಸಿಂಪಿ ಹಾಗೂ ಜಿಲ್ಲಾಧಿಕಾರಿ ಶ್ರಮವೇ ಕಾರಣ ಎಂದರು.
ಲೋಹಿತ್ ಕಟ್ಟಿ, ಕಸಾಪ ಕಲಬುರಗಿ ಗ್ರಾಮೀಣ ವಲಯದ ಅಧ್ಯಕ್ಷ ಶರಣಗೌಡ ಪಾಟೀಲ, ತಾಲೂಕಾಧ್ಯಕ್ಷ ಮೃತ್ಯುಂಜಯ ಹಿರೇಮಠ, ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ದೇವರಮನಿ, ಕನಕಪ್ಪ ದಂಡಗುಲಕರ್ ಮಾತನಾಡಿದರು.
ಸಾಹಿತಿ ಸಿದ್ದಲಿಂಗಯ್ಯ ಹಿರೇಮಠ, ಅಪ್ಪು ನಾಗಶೆಟ್ಟಿ, ಸಿದ್ರಾಮಪ್ಪ ಮುದಿಗೌಡ, ಡಾ| ಅಹ್ಮದ್ ಪಟೇಲ್, ವೈಜನಾಥ ಹುಗ್ಗಿ, ಬಸವರಾಜ ಮದ್ರಕಿ, ಬಸವರಾಜ ಬಿರಾದಾರ, ಅರುಣ ಜಾಯಿ, ಜಗದೀಶ ಇಂಗಿನ, ಉಮೇಶ ಪೂಜಾರಿ ಮತ್ತಿತರರು ಇದ್ದರು. ಭರತ್ ಧನ್ನಾ ನಿರೂಪಿಸಿದರು, ರವಿ ಬೆಳಮಗಿ ಸ್ವಾಗತಿಸಿದರು, ಶಾಂತಪ್ಪ ಹಡಪದ ವಂದಿಸಿದರು.