ಕಲಬುರಗಿ: ಕೇವಲ ಪಠ್ಯದಲ್ಲಿ ಸಾಹಿತಿಗಳ ಹೆಸರನ್ನು ಕೇಳಿದ ಮಕ್ಕಳಿಗೆ ಸ್ವತಃ ಸಾಹಿತಿಗಳನ್ನು ಕಣ್ಣಾರೆ ಕಾಣಲು ಜತೆಗೆ ಸಾಹಿತ್ಯಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯೊಂದು ಮಕ್ಕಳನ್ನು ಸಮ್ಮೇಳನಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದೆ.
ಜಿಲ್ಲೆಯ ಆಳಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯಿತಿ ತನಗೆ ಬಂದಿರುವ ತೆರಿಗೆ ಹಣದಲ್ಲಿ 20 ಸಾವಿರ ರೂ. ವಿನಿಯೋಗಿಸಿ ಫೆ. 5ರಿಂದ ನಡೆಯುವ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 10 ಕ್ರೂಜರ್‌ಗಳ ವ್ಯವಸ್ಥೆ ಮಾಡಲು ನಿರ್ಧರಿಸಿದ್ದು, ಇದಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗುತ್ತಿದೆ. ಸಮ್ಮೇಳನಕ್ಕೆ ಮಕ್ಕಳನ್ನು ಕರೆ ತರಲು ಧನ್ನೂರ ಗ್ರಾ.ಪಂ ವ್ಯಾಪ್ತಿಯ ನೆಲ್ಲೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯಶಿಕ್ಷಕ ಡಿ.ಎನ್. ಪಾಟೀಲ ಚಿಂತನೆ ನಡೆಸಿದ್ದರು. ಶಿಕ್ಷಕರು ಹಾಗೂ ಮಕ್ಕಳಿಂದ ಕೆಲವೊಂದಿಷ್ಟು ಹಣ ಸಂಗ್ರಹಿಸಲು ಮುಂದಾಗಿದ್ದರು. ಈ ಮಾಹಿತಿ ಅರಿತ ಗ್ರಾಮ ಪಂಚಾಯಿತಿ ಸದಸ್ಯ ಹಣಮಂತರಾವ ಖ್ಯಾಮದೆ ಅವರು, ಸಮ್ಮೇಳನಕ್ಕೆ ಮಕ್ಕಳನ್ನೆಲ್ಲ ಕರೆದುಕೊಂಡು ಹೋಗಿ. ಯಾರಿಂದಲೂ ಹಣ ಸಂಗ್ರಹಿಸಬೇಡಿ. ಗ್ರಾ.ಪಂ ವತಿಯಿಂದಲೇ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ತದನಂತರ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮಾಲೋಚಿಸಿ ತೆರಿಗೆ ಹಣ ನೀಡುವ ಕುರಿತಾಗಿ ನಿರ್ಧಾರ ಕೈಗೊಂಡರು. ಪರಿಣಾಮವಾಗಿ ಧನ್ನೂರ ಹಾಗೂ ನೆಲ್ಲೂರ ಗ್ರಾಮದ ಶಾಲಾ ಮಕ್ಕಳಿಗೆ ಹತ್ತು ಕ್ರೂಜರ್ ವ್ಯವಸ್ಥೆ ಮಾಡಿದ್ದು, ಮಕ್ಕಳು ನುಡಿ ಜಾತ್ರೆಗೆ ಬರಲು ಸನ್ನದ್ಧರಾಗಿದ್ದಾರೆ. ಇದೇ ತೆರನಾದ ಭಾವನೆ ಹೊಂದಿ ಶಾಲಾ ಮಕ್ಕಳಿಗೆ ಸಮ್ಮೇಳನಕ್ಕೆ ಹೋಗಿ ಬರುವಂತಾಗಲು ಗ್ರಾಮ ಪಂಚಾಯಿತಿಗಳು ಮುಂದೆ ಬಂದಲ್ಲಿ ಎಲ್ಲ ಮಕ್ಕಳಿಗೆ ಸಾಹಿತ್ಯ ಸಮ್ಮೇಳನವನ್ನು ಕಣ್ಣಾರೆ ಸವಿಯಲು ಸಹಕಾರಿಯಾಗುತ್ತದೆ.
32 ವರ್ಷಗಳ ನಂತರ ಕಲಬುರಗಿಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಶಾಲೆಯ ಮಕ್ಕಳು ಸಾಹಿತಿಗಳ ಹೆಸರನ್ನು ಪಠ್ಯದಲ್ಲೇ ನೋಡಿರುತ್ತಾರೆ. ಅವರನ್ನು ಖುದ್ದಾಗಿ ಕಾಣಲಿ ಹಾಗೂ ಸಾಹಿತ್ಯಾಸಕ್ತಿ ಬೆಳೆಯಲೆಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯಿಂದ ವಾಹನ ಸೌಕರ್ಯ ಕಲ್ಪಿಸಲಾಗಿದೆ.
ಹಣಮಂತರಾವ ಖ್ಯಾಮದೆ,
ಗ್ರಾ.ಪಂ ಸದಸ್ಯ, ಧನ್ನೂರ
ಸಾಹಿತ್ಯದಲ್ಲಿ ನಮಗೆ ಆಸಕ್ತಿಯಿದೆ. ನಾನು ಏಳೆಂಟು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೇನೆ. ಈ ಸಲ ಜಿಲ್ಲೆಯಲ್ಲೇ ಸಮ್ಮೇಳನ ನಡೆಯುತ್ತಿರುವುದರಿಂದ ಮಕ್ಕಳನ್ನು ಕರೆದುಕೊಂಡು ಹೋಗಬೇಕೆಂದು ಉದ್ದೇಶಿಸಲಾಗಿತ್ತು. ಶಿಕ್ಷಕರಿಂದ ಹಾಗೂ ಮಕ್ಕಳಿಂದ ಹಣ ಸಂಗ್ರಹಿಸಿ ಹೋಗಲು ನಿರ್ಧರಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿಯವರೇ ಮುಂದೆ ಬಂದು ವಾಹನ ಸೌಕರ್ಯ ಕಲ್ಪಿಸಿದ್ದಾರೆ. ಹೀಗಾಗಿ ಎಲ್ಲ ಮಕ್ಕಳನ್ನು ಸಮ್ಮೇಳನಕ್ಕೆ ಕರೆದುಕೊಂಡು ಹೋಗಲಾಗುವುದು.
ಡಿ.ಎನ್. ಪಾಟೀಲ,
ಪ್ರಭಾರಿ ಮುಖ್ಯಶಿಕ್ಷಕ, ಸರ್ಕಾರಿ ಪ್ರೌಢ ಶಾಲೆ, ನೆಲ್ಲೂರ
ಹಣಮಂತರಾವ ಭೈರಾಮಡಗಿ