ಕಲಬುರಗಿ: ಕೆಲಸದ ಒತ್ತಡ ಕಡಿಮೆಗೊಳಿಸುವಂತೆ ಹಾಗೂ ಬೇರೆ ಇಲಾಖೆಗಳ ಕೆಲಸದಿಂದ ಮುಕ್ತಿಗೊಳಿಸುವಂತೆ ಕರ್ನಾಟಕ ಕೃಷಿ ಪದವೀಧರ ಅಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಸಹಾಯಕ ಕೃಷಿ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಕೃಷಿ ಇಲಾಖೆಯಲ್ಲೇ ಸಾಕಷ್ಟು ಕೆಲಸದಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳ ಆಗುತ್ತಿದೆಯಲ್ಲದೇ ಬೇರೆ ಇಲಾಖೆಗಳ ಕೆಲಸವನ್ನು ಇಲಾಖೆಗೆ ವಹಿಸುತ್ತಿರುವುದರಿಂದ ತೀವ್ರ ಆರೋಗ್ಯದ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಕೆಲಸದ ಹೊರೆ ಕಡಿಮೆಗೊಳಿಸುವಂತೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಕೃಷಿ ಇಲಾಖೆಯು ರೈತರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಪ್ರತಿ ವರ್ಷ ಕೃಷಿ ಇಲಾಖೆಗೆ ಅನುದಾನ ನೀಡಿ, ಅನೇಕ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ನಾಲ್ಕಾರು ಜನರು ಮಾಡುವ ಕೆಲಸವನ್ನು ಒಬ್ಬರೇ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ದಿನೇ ದಿನೇ ಒತ್ತಡ ಜಾಸ್ತಿಯಾಗುತ್ತಿದೆ. ಅಲ್ಲದೇ ಸತತವಾಗಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುವಂತಾಗಿದೆ ಎಂದು ಎರಡು ಸಂಘಗಳ ಪದಾಧಿಕಾರಿಗಳು ಮನವಿಯಲ್ಲಿ ವಿವರಿಸಿದ್ದು, ಸ್ಪಂದಿಸುವಂತೆ ಕೋರಿದರು.
ಹೋಬಳಿ ಮಟ್ಟದಲ್ಲಿಯೂ ಎರಡ್ಮೂರು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುವ ಪರಿಸ್ಥಿತಿಯಿದೆ. ಹಲವಾರು ವರ್ಷಗಳಿಂದ ಬೇರು ಮಟ್ಟದಲ್ಲಿ ಸಹಾಯಕ ಕೃಷಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು ನೇಮಕವಾಗದೇ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆ, ಮಣ್ಣಿನ ಸತ್ವ ಹೆಚ್ಚಿಸುವಿಕೆ, ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಯಾಂತ್ರೀಕರಣ, ರೈತ ಸಿರಿ, ಗುಣನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಶೂನ್ಯ ಬಂಡವಾಳ ಕೃಷಿ, ಪಿಎಂ ಕಿಸಾನ್ ಯೋಜನೆ, ಬೆಳೆ ಹಾನಿ ಸಮೀಕ್ಷೆ, ಜಲಾಮೃತ ಯೋಜನೆ ಇತ್ಯಾದಿ ಯೋಜನೆಗಳ ಅನುಷ್ಠಾನ ಮಾಡಲಾಗುತ್ತಿದೆ. ಇಷ್ಟೆಲ್ಲ ಯೋಜನೆಗಳನ್ನು ಹೋಬಳಿ ಮಟ್ಟದಲ್ಲಿಯೂ ಎರಡ್ಮೂರು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಸಿಬ್ಬಂದಿಗೆ ಆ್ಯಪ್‌ಗ್ಳ ಬಳಕೆ ಕುರಿತು ಸರಿಯಾಗಿ ತರಬೇತಿ ನೀಡಿಲ್ಲ. ಕೆಲವೆಡೆ ಆ್ಯಪ್ ಗಳು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಎಂದು ಅಧಿಕಾರಿಗಳು ಅಳಲು ತೋಡಿಕೊಂಡರು.
ಬೆಳೆ ಸಮೀಕ್ಷೆ ಯೋಜನೆ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ಕಟಾವು ಪ್ರಯೋಗಗಳು, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ರೋಗ ಖಾತ್ರಿ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮುಂತಾದ ಯೋಜನೆಗಳ ಕೆಲಸಗಳನ್ನು ಸಿಬ್ಬಂದಿ ಕೊರತೆಯಿಂದ ಸಕಾಲದಲ್ಲಿ ಮುಗಿಸಲು ಆಗುತ್ತಿಲ್ಲ. ಜತೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು, ಕೃಷಿ ಇಲಾಖೆಯ ಮೂಲ ಯೋಜನೆಗಳ ಹೊರತಾಗಿ ಇತರೆ ಯೋಜನೆಗಳ ಕೆಲಸಗಳನ್ನು ಮಾಡಲು ಒತ್ತಡ ಹೇರುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರ ಕನಿಷ್ಟ ಇಬ್ಬರು ಡಿಇಒ, ಒಬ್ಬ ಎಸ್ ಡಿಎ, ಇಬ್ಬರು ಡಿ-ದರ್ಜೆ ನೌಕರರನ್ನು ಕಾಯಂ ನೇಮಿಸಬೇಕು. ಕ್ಷೇತ್ರಮಟ್ಟದಲ್ಲಿ ಸಂಚಾರ ಮಾಡಲು ವಾಹನ ವ್ಯವಸ್ಥೆ ಮಾಡಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಗುತ್ತಿಗೆ ನೌಕರರನ್ನು ನೇಮಿಸಬಾರದು ಎಂದು ಆಗ್ರಹಿಸಿದರು.
ಕೆಲಸದ ಒತ್ತಡ ಕಡಿಮೆಗೊಳಿಸುವುದರ ಜತೆಗೆ ಕೃಷಿ ಇಲಾಖೆಗೆ ಸೇರಿರುವ ಅಧಿಕಾರಿ ತನ್ನ ಸೇವಾ ಅವಧಿಯಲ್ಲಿ ಕನಿಷ್ಟ ಮೂರು ಬಾರಿಯಾದರೂ ಪದೋನ್ನತಿ ಹೊಂದಲೇಬೇಕು. ಹೀಗಾಗಿ ಇಲಾಖಾ ಮಟ್ಟದಲ್ಲಿ ಎಲ್ಲ ಹಂತದ ಅ ಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಸಮರ್ಪಕಗೊಳಿಸಿ ಮುಂಬಡ್ತಿ ನೀಡಬೇಕೆಂದರು. ಮನವಿ ಸಲ್ಲಿಕೆ ಸಂದರ್ಭದಲ್ಲಿ ಜಂಟಿ ಕರ್ನಾಟಕ ಕೃಷಿ ಪದವೀಧರ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸುಗೂರ, ಪದಾಧಿಕಾರಿಗಳಾದ ಅನುಸೂಯಾ ಹೂಗಾರ, ಡಾ| ಬಾಲರಾಜ ರಂಗರಾವ್, ಮೃತ್ಯುಂಜಯ ಪತಂಗೆ, ಸುನೀಲಕುಮಾರ ಜವಳಗಿ, ಚಂದ್ರಕಾಂತ ಜೀವಣಗಿ, ಮಹ್ಮದ ಕಾಸಿಂ, ಶರಣಗೌಡ, ಅನೀಲಕುಮಾರ, ಹಂಪಣ್ಣ, ಸಿದ್ಧಾರೂಢ ಪಾಟೀಲ, ರವಿ ನಾಟೀಕಾರ, ಶಶಿಕಾಂತ ಭರಣಿ, ರಾಣಪ್ಪ ಕುಮಸಿ, ಕೇಶವ ಹಜಾರೆ, ಜಹಾಂಗೀರ, ಸಾಯಬಣ್ಣ ಮುಂತಾದವರಿದ್ದರು.