Advertisement

ಮುಗಿದ ಸಮ್ಮೇಳನ: ನಡೆದಿದೆ ಆತ್ಮಾವಲೋಕನ

11:39 AM Feb 09, 2020 | Team Udayavani |

ಕಲಬುರಗಿ: 32 ವರ್ಷಗಳ ನಂತರ ಮೂರು ದಿನಗಳ ಕಾಲ ನಡೆದ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ಶುಕ್ರವಾರ ತೆರೆ ಬಿದ್ದಿದೆಯಾದರೂ, ಸಮ್ಮೇಳನ ಯಶಸ್ವಿ ಹಾಗೂ ಗೋಷ್ಠಿ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚೆ ಮುಂದುವರಿದಿದೆ.

Advertisement

ಮಳೆ ನಿಂತರೂ ಎಲೆ ಮೇಲಿನ ಹನಿ ನಿಲ್ಲೋದಿಲ್ಲ ಎನ್ನುವಂತೆ ಕಲಬುರಗಿಯಲ್ಲದೇ ಈ ಭಾಗದಾದ್ಯಂತ ಸಮ್ಮೇಳನದ ಗುಣಗಾನವೇ ನಡೆಯುತ್ತಿದೆ. ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಆದರೆ ಸಮ್ಮೇಳನ, ಗೋಷ್ಠಿ, ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ವಿಷಯ ಕುರಿತು ವಿವಿಧ ಆಯಾಮಗಳಲ್ಲಿ ಚರ್ಚೆ, ಸಂವಾದಗಳು ಸಾಹಿತ್ಯಿಕ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಮುಂದಿನ 86ನೇ ಸಮ್ಮೇಳನವೂ ಉತ್ತರ ಕರ್ನಾಟಕದ ಹಾವೇರಿಯಲ್ಲೇ ನಡೆಯುತ್ತಿದೆ ಎಂಬುದಾಗಿ ದಕ್ಷಿಣ ಭಾಗದ ಸಾಹಿತಿಗಳು, ಸಾಹಿತ್ಯಾಸಕ್ತರು ಎನ್ನುತ್ತಿರುವುದು ಸಮ್ಮೇಳನ ಮೂಲೆಯೊಂದರಲ್ಲಿ ಕೇಳಿ ಬಂತು. ಇದಕ್ಕೆ ಸಮ್ಮೇಳನ ನಮ್ಮ ಕಡೆಯಾದರೂ ಸಮ್ಮೇಳನದ ಸರ್ವಾಧ್ಯಕ್ಷರು ನಿಮ್ಮ ಕಡೆಯವರೇ ಆಗ್ತಾರಲ್ಲ ಎಂದು ಸಮಾಧಾನದ ಉತ್ತರ ಕೊಡುವ ಮನಸ್ಸಿನ ಭಾವನೆ ವ್ಯಕ್ತಪಡಿಸಿದ್ದನ್ನು ಪ್ರಮುಖವಾಗಿ ಅವಲೋಕಿಸಲಾಗುತ್ತಿದೆ. ಸಮ್ಮೇಳನ ನಡೆಯುವ ಭಾಗದವರೇ ಸಮ್ಮೇಳನಾಧ್ಯಕ್ಷ ರಾಗಬೇಕೆಂಬ ಕೂಗು ಸಮ್ಮೇಳನ ಸಂದರ್ಭದಲ್ಲಿ ಕೇಳಿ ಬರುವುದು ಸಹಜ. ಆದರೆ ಭಾಗ, ರೇಖೆ ಇರಬಾರದು ಎಂಬುದು ಸಾಹಿತ್ಯಲೋಕದ ಅಭಿಮತ. ಇದನ್ನು ಪುನರುಚ್ಛಿಸಿರುವುದು ಕಂಡು ಬಂತು.

ಸಮಯಕ್ಕೆ ಆದ್ಯತೆ: ಎಲ್ಲ ಕಡೆ ಸಮ್ಮೇಳನ ಉದ್ಘಾಟನೆ ತಡವಾಗಿರುವುದನ್ನೆ ನೋಡಿದ್ದೇವೆ. ಕೆಲವು ಭಾಗದಲ್ಲಂತೂ ಕಾರ್ಯಕ್ರಮಗಳು- ವಿಚಾರ ಸಂಕಿರಣ ಸರಿಯಾದ ಸಮಯಕ್ಕೆ ನಡೆಯುವುದೇ ಇಲ್ಲ. ಆದರೆ ಕಲಬುರಗಿಯಲ್ಲಿನ ಸಮ್ಮೇಳನ ಸರಿಯಾದ ಸಮಯಕ್ಕೆ ಆರಂಭವಾಗಿರುವುದು ನೆನಪಿನಲ್ಲಿಡುವಂತಾಗಿದೆ. ಆದರೆ 3ನೇ ದಿನದ ಕಾರ್ಯಕ್ರಮಗಳು ಮಾತ್ರ ಸಮಯ ಮೀರಿದ್ದು ಅನುಭವಕ್ಕೆ ಬಂತು.

ಅಕ್ಷರದ ಮೂಲಕ ಪ್ರತಿಭಟನೆ
ಸಮ್ಮೇಳನ ಮೂಲ ಆಶಯದೊಂದಿಗೆ ನಡೆಯಲಿ-ಬಿಡಲಿ ತಮ್ಮದು ಏನಿದ್ದರೂ ತಾವು ಮಾಡುತ್ತಾ ಬಂದಿರುವ ವಿಷಯ ಹಾಗೂ ವಾದ ಕೈ ಬಿಡುವುದಿಲ್ಲ ಎನ್ನುವಂತೆ ಹಲವರು ಪ್ರಸ್ತುತಪಡಿಸಿರುವುದು ಹಾಗೂ ಅದನ್ನೇ ದೊಡ್ಡ ವಿಷಯವಾಗಿರುವುದು ಸಮ್ಮೇಳನದಲ್ಲಿ ದಾಖಲಿಕೆಯಾಯಿತು. ನಾವು ನಮ್ಮ ಎದೆಯೊಳಗಿನ ದನಿಯನ್ನು ಹೊರಗೆ ಹಾಕದೆ ಬಿಡುವವರಲ್ಲ ಎಂದು ಕಲ್ಯಾಣ ಕರ್ನಾಟಕದ ಸಾಹಿತಿಗಳು, ಬರಹಗಾರರು, ಕವಿಗಳು ಪೌರತ್ವ ಕಾಯ್ದೆ ತಿದ್ದುಪಡಿ, ಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಕೋಮುವಾದ, ಸಂವಿಧಾನಕ್ಕೆ ಅಪಚಾರ, ಮಹಿಳಾ ವಿರೋಧಿ ನೀತಿ ಇತ್ಯಾದಿ ವಿಷಯಗಳ ಕುರಿತು ತಮ್ಮ ಅಕ್ಷರದ ಪ್ರತಿಭಟನೆ ದಾಖಲಿಸಿದರು.

ಜಿಲ್ಲಾಧಿಕಾರಿ ಗುಣಗಾನ
ಸಮ್ಮೇಳನ ನಿರೀಕ್ಷೆ ಮೀರಿ ಯಶಸ್ವಿಯಾಗಿರುವಲ್ಲಿ ಬಹುಪಾಲು ಜಿಲ್ಲಾಧಿಕಾರಿ ಶರತ್‌ ಬಿ. ಅವರಿಗೆ ಸಲ್ಲುತ್ತದೆ. ಸಮ್ಮೇಳನ ಯಶಸ್ವಿ ರೂವಾರಿ ಡಿಸಿ ಎನ್ನಲಾಗುತ್ತಿದೆ. ನನ್ನ ಜಿಲ್ಲೆಯ ಸಮ್ಮೇಳನ ಯಶಸ್ವಿಯಾಗಬೇಕೆಂದು ಜಪಿಸುತ್ತಾ ಕಳೆದ ಒಂದು ತಿಂಗಳಿನಿಂದ ಹಗಲಿರಳು ಶ್ರಮಿಸಿರುವುದು ಈಗ ಎಲ್ಲರ ಬಾಯಲ್ಲಿ ನುಲಿಯುತ್ತಿದೆ. ಅದೇ ರೀತಿ ಕಸಾಪ ಜಿಲ್ಲಾಧ್ಯಕ್ಷ ಸಿಂಪಿ ಮತ್ತವರ ತಂಡ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಸಮ್ಮೇಳನದ ಯಸಸ್ವಿಗೆ ಕೈ ಜೋಡಿಸಿದರು ಎಂದು ವಿಮರ್ಶಿಸಲಾಗುತ್ತಿದೆ.

Advertisement

ಕುಗ್ಗದ ಉತ್ಸಾಹ
ಹಲವು ಸಮ್ಮೇಳನದಲ್ಲಿ ಮೊದಲನೇ ದಿನ ಇದ್ದಷ್ಟು ಜನ ಮೂರು ದಿನದುದ್ದಕ್ಕೂ ಇರೋದಿಲ್ಲ ಎನ್ನುವ ಕೊರಗು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಮೂರು ದಿನಕ್ಕೂ ಅಷ್ಟೇ ಅದರಲ್ಲೂ ಮುಕ್ತಾಯ ಸಮಾರಂಭದಲ್ಲಿ ಇನ್ನೂ ಹೆಚ್ಚಿಗೆ ಎನ್ನುವಂತೆ ಜನ ಸೇರಿರುವುದು ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ದಾಖಲು ಎನ್ನಲಾಗುತ್ತಿದೆ.

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next