Advertisement

ರೈಲ್ವೆ ವಿಭಾಗದ ಪ್ರಕ್ರಿಯೆ ಆರಂಭವೇ ಆಗಿಲ್ಲ: ಜಾಧವ

10:07 AM Aug 30, 2019 | Team Udayavani |

ಕಲಬುರಗಿ: ಕಲಬುರಗಿ ರೈಲ್ವೆ ವಿಭಾಗವನ್ನು ಘೋಷಣೆ ಮಾಡಿದ್ದು ಬಿಟ್ಟರೇ ಆರಂಭಿಸುವ ಪ್ರಕ್ರಿಯೆ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಇದಕ್ಕಾಗಿ ಅನುದಾನವನ್ನೂ ಮೀಸಲಿಟ್ಟಿಲ್ಲ ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಪಾದಚಾರಿಗಳ ಮೇಲ್ಸೇತುವೆ ಉದ್ಘಾಟನೆ ಮತ್ತು ಲಿಫ್ಟ್‌ ಕಾಮಗಾರಿಗೆ ಚಾಲನೆ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ರೈಲ್ವೆ ವಿಭಾಗ ಆರಂಭ ಪ್ರಕ್ರಿಯೆ ಇನ್ನೂ ಆರಂಭವೇ ಆಗಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ರೈಲ್ವೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪಿಸಿದೆ ದೂರಿದರು.

ಈ ಸಮಯದಲ್ಲಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಮೇಲೆ ಒತ್ತಡ ಹೇರಿ ಆಂಭಿಸುವೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, ನಾನು ಸಂಸದನಾದ ತಕ್ಷಣವೇ ಮೊದಲ ಕರ್ತವ್ಯವಾಗಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ್ದೇನೆ ಎಂದಷ್ಟೇ ಹೇಳಿದರು.

ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಎಲ್ಲ ಸಮಸ್ಯೆಗಳು ಪುಣೆ ಮತ್ತು ಸೊಲ್ಲಾಪುರ ವಿಭಾಗದ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕಲಬುರಗಿ-ಬೆಂಗಳೂರು ಮಧ್ಯೆ ಹೊಸ ರೈಲು ಆರಂಭಿಸಬೇಕು. ಅಫಜಲಪುರ ತಾಲೂಕಿನ ನೀಲೂರ ಬ್ರಿಜ್ಡ್ ಕೆಳ ಸೇತುವೆ ಕಾಮಗಾರಿಯನ್ನು 4 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿದ್ದಾನೆ ಎಂದರು.

ಇದುವರೆಗೆ ಅಂಗವಿಕಲರು ರಿಯಾಯಿತಿ ಪಾಸ್‌ ಪಡೆಯಲು ಸೊಲ್ಲಾಪುರಕ್ಕೆ ಹೋಗಬೇಕಾಗಿತ್ತು. ಅದನ್ನು ಇದೀಗ ಕಲಬುರಗಿಯಲ್ಲಿಯೇ ಪಾಸ್‌ ನೀಡುವ ವ್ಯವಸ್ಥೆ ಈಗಾಗಲೇ ಆರಂಭಿಸಲಾಗಿದೆ. ಜತೆಗೆ ರೈಲ್ವೆ ನಿಲ್ದಾಣದಲ್ಲಿ ವಿಐಪಿಗಾಗಿ ಹವಾನಿಯಂತ್ರಿತ ಕೊಠಡಿ ಸ್ಥಾಪನೆ, ಅಂಗವಿಕಲರು, ವಯೋವೃದ್ಧರಿಗೆ ಅನುಕೂಲಕ್ಕಾಗಿ ಅ.2ರೊಳಗಾಗಿ ಬ್ಯಾಟರಿ ಚಾಲಿತ ವಾಹನ ಸೇವೆ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

Advertisement

ನಿಮ್ಹಾನ್ಸ್‌ ಶಾಖೆ ಆರಂಭಕ್ಕೆ ಕ್ರಮ: ನಗರದ ಇಎಸ್‌ಐ ಆಸ್ಪತ್ರೆ ಕಟ್ಟಡದಲ್ಲಿ ನಿಮ್ಹಾನ್ಸ್‌ ಸಂಸ್ಥೆಯ ಶಾಖೆಯನ್ನು ತೆರೆಯಲು ಮನವಿ ಮಾಡಲಾಗಿದೆ. ಈ ಸಂಬಂಧ ಸೆ.6ರಂದು ಇಎಸ್‌ಐ ಡೈರೆಕ್ಟರ್‌ ಜನರಲ್ ನಗರಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದ ಜಾಧವ, ಅಲ್ಲದೇ, ರೋಗಿಗಳ ಅನುಕೂಲಕ್ಕಾಗಿ ಆಸ್ಪತ್ರೆಯಲ್ಲಿ ಈಗಾಗಲೇ ಬ್ಲಿಡ್‌ ಬ್ಯಾಂಕ್‌ ಆರಂಭಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಆಸ್ಪತ್ರೆ ಆವರಣದಲ್ಲಿ ಹೊರ ಪೊಲೀಸ್‌ ಠಾಣೆ ಸಹ ಕಾರ್ಯಾರಂಭ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದ ಮ್ಯಾನೇಜರ್‌ ಎ.ಎಸ್‌. ಪ್ರಸಾದ್‌ ರಾವ್‌, ಸಹಾಯಕ ವಿಭಾಗೀಯ ಇಂಜಿನಿಯರ್‌ ಅವಿದೇಶ ಮೀನಾ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೇದಾರ್‌, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಎಂಎಲ್ಸಿಗಳಾದ ಶಶೀಲ ನಮೋಶಿ, ಅಮರನಾಥ ಪಾಟೀಲ, ಬಿಜೆಪಿ ಮುಖಂಡ ಶರಣಪ್ಪ ಹದನೂರ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.

ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನ ಹಾರಾಟಕ್ಕೆ ಈಗಾಗಲೇ ರಾಜ್ಯ ಸರ್ಕಾರ ಮತ್ತು ಏರ್‌ಪೋರ್ಟ್‌ ಆಥಾರಿಟಿ ಆಫ್‌ ಇಂಡಿಯಾ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದಷ್ಟು ಶೀಘ್ರ ವಿಮಾನ ಹಾರಾಟ ಸೇವೆ ಆರಂಭಕ್ಕೆ ಮನವಿ ಮಾಡಲಾಗಿದೆ.
ಡಾ| ಉಮೇಶ ಜಾಧವ,
 ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next