ಕಲಬುರಗಿ: ಬಿಸಿಲೂರಿನ ಸೂರ್ಯ ನೆತ್ತಿ ಮೇಲೆ ಬಂದು ನಿಂತು ಚುರು-ಚುರು ಸುಡಲು ಆರಂಭಿಸಿದ್ದ. ಸೂರ್ಯನ ಪ್ರತಾಪ ಲೆಕ್ಕಿಸದೆ ಸಾವಿರಾರು ಕಣ್ಣುಗಳು ಬಾನಿನತ್ತಲೇ ನೆಟ್ಟಿದ್ದವು. ಆಕಾಶದಲ್ಲಿ ಮಿಂಚಿನಂತೆ ಲೋಹದ ಹಕ್ಕಿ ಮೂಡುತ್ತಿದ್ದಂತೆ ಎಲ್ಲೆಲ್ಲೂ ಹರ್ಷೋದ್ಘಾರ…ಕಿವಿಗಡಚಿಕ್ಕುವ ಚಪ್ಪಾಳೆಯದ್ದೇ ಸದ್ದು… ನಾಲ್ಕು ದಶಕಗಳಿಂದ ಕಾತುರದಿಂದ ಎದುರು ನೋಡುತ್ತಿದ್ದ ಐತಿಹಾಸಿಕ ಕ್ಷಣ ಕಣ್ಣು ತುಂಬಿಸಿಕೊಂಡ ಸಂಭ್ರಮ.
ತೊಗರಿ ಕಣಜ ನೆಲಕ್ಕೆ ಲೋಹದ ಹಕ್ಕಿ ಮುತ್ತಿಕ್ಕುತ್ತಿದ್ದಂತೆ ನೆಲ ಮೇಲೆ ನಿಂತಿದ್ದ ಜನರು ಕುಣಿದು ಕುಪ್ಪಳಿಸಿ ಗಾಳಿಯಲ್ಲಿ ತೇಲಾಡಿದರು. ಇದು ಇಲ್ಲಿಂದ 15 ಕಿ.ಮೀ. ದೂರದಲ್ಲಿರುವ ನೂತನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಲೋಹದ ಹಕ್ಕಿ ಇಳಿಯುತ್ತಿದ್ದ ಸಂದರ್ಭದಲ್ಲಿ ಕಂಡಂತಹ ದೃಶ್ಯ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಸಂಸ್ಥೆಯ ಒಜಿ-117 ಸಂಖ್ಯೆಯ ವಿಮಾನ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ಗಣ್ಯರು ಮತ್ತು ನಾಗರಿಕರನ್ನು ಹೊತ್ತು ತಂದಿತು.
ಬೆಂಗಳೂರಿನಿಂದ ಮಧ್ಯಾಹ್ನ ಸರಿಯಾಗಿ 12:24ಕ್ಕೆ ಹೊರಟ ವಿಮಾನ 1:40ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೂಸ್ಪರ್ಶ ಮಾಡಿತು. ಪ್ರಥಮ ವಾಣಿಜ್ಯ ಸಂಚಾರವಾಗಿ ವಿಮಾನ ಇಳಿಯುತ್ತಿದ್ದಂತೆ ವಿಮಾನಕ್ಕೆ ನೀರು ಚಿಮ್ಮುವ ಮೂಲಕ ಪ್ರಯಾಣಿಕರಿಗೆ ವಾಟರ್ ಸಲ್ಯೂಟ್ ನೀಡಿದ್ದು ವಿಶೇಷವಾಗಿತ್ತು.
ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ, ಜನಪ್ರತಿನಿಧಿಗಳು ಹಾಗೂ ನಾಗರಿಕರಲ್ಲಿ ಹರ್ಷದ ಹೊನಲು ಹರಿಯಿತು. ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ, ಪ್ರಭು ಚವ್ಹಾಣ, ಸಂಸದರಾದ ಡಾ| ಉಮೇಶ ಜಾಧವ, ಭಗವಂತ ಖೂಬಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಳಿಧರರಾವ್, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ ಹಾಗೂ ನಗರದ ಉದ್ಯಮಿಗಳು, ಗಣ್ಯರ ಸಮೇತ ಸಾಮಾನ್ಯ ನಾಗರಿಕರು ವಿಮಾನದಲ್ಲಿ ಬಂದರು.
ವಿಮಾನ ಭೂಸ್ಪರ್ಶ ಮಾಡುವುದನ್ನು ನೋಡಲು ನಿಲ್ದಾಣದ ಆವರಣದಲ್ಲಿ ನೆರದಿದ್ದ ಜನರು ಶಿಳ್ಳೆ, ಕೇಕೆ, ಜಯ ಘೋಷಣೆಗಳ ಕರತಾಡನ ಮೊಳಗಿಸಿ ಸಡಗರಪಟ್ಟರು. ವಿಮಾನದಿಂದ ಬಂದಿಳಿದ ನಂತರ ಮುಖ್ಯಮಂತ್ರಿಗಳು ಸಂಭ್ರಮದ ಅಂಗವಾಗಿ ಸ್ಟಾರ್ ಏರ್ ಸಂಸ್ಥೆಯ ಕೇಕ್ ಕತ್ತರಿಸಿದರು.
ನಂತರದಲ್ಲಿ ಕಾರ್ಯಕ್ರಮ ವೇದಿಕೆ ಮೇಲೆ ಗುಂಡಿ ಒತ್ತುವ ಮೂಲಕ ವಿಮಾನ ನಿಲ್ದಾಣವನ್ನು ಅಧಿಕೃತವಾಗಿ ಉದ್ಘಾಟಿಸಿದರು. ತದನಂತರ ಅದೇ ಸ್ಟಾರ್ ಏರ್ ಸಂಸ್ಥೆಯ ಒಜಿ-118 ವಿಮಾನದ ಮೂಲಕವೇ ಬೆಂಗಳೂರಿಗೆ ಜನ ಸಾಮಾನ್ಯರೊಂದಿಗೆ ಮರಳಿ ಪ್ರಯಾಣ ಬೆಳೆಸಿದರು.