ಕಲಬುರಗಿ: ರಾಜ್ಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಇನ್ನೊಂದು ಶಾಖೆ ತೆರೆಯುವ ಪ್ರಸ್ತಾಪ ಹಾಗೂ ಯೋಜನೆ ಸಂಸ್ಥೆಯ ಮುಂದಿಲ್ಲ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ| ಸಿ.ಎಸ್. ಮಂಜುನಾಥ ತಿಳಿಸಿದರು.
150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆ ಕಟ್ಟಡ ನಿರ್ಮಾಣದ ಸ್ಥಳ ವೀಕ್ಷಿಸಿದ ನಂತರ ಜಯದೇವ ಆಸ್ಪತ್ರೆಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿವೆ.
ಇವುಗಳ ವೈದ್ಯಕೀಯ ಸೇವೆಯನ್ನು ಮತ್ತಷ್ಟು ಬಲವರ್ಧನೆಯೊಂದಿಗೆ ಮುನ್ನಡೆಸಲಾಗುವುದು. ಹೀಗಾಗಿ ಹೊಸ ಆಸ್ಪತ್ರೆ ಸ್ಥಾಪನೆಗೆ ಮುಂದಾಗುವುದಿಲ್ಲ. ರಾಜ್ಯವಲ್ಲದೇ ಹೊರ ರಾಜ್ಯದಲ್ಲೂ ಜಯದೇವ ಆಸ್ಪತ್ರೆ ಶಾಖೆ ತೆರೆಯಬೇಕೆಂಬ ಬೇಡಿಕೆಗಳು ಬರುತ್ತಿವೆ. ಆದರೆ ಎಲ್ಲೂ ಸ್ಥಾಪನೆಗೆ ಮುಂದಾಗುವುದಿಲ್ಲ. ಬೆಂಗಳೂರು ಆಸ್ಪತ್ರೆಯಲ್ಲಿ ದಿನಾಲು 1700 ಜನರಿಗೆ ಹೃದ್ರೋಗ ಸಂಬಂಧ ಪರೀಕ್ಷೆ ಕೈಗೊಂಡರೇ ಮೈಸೂರಲ್ಲಿ 600 ಹಾಗೂ ಕಲಬುರಗಿ ಆಸ್ಪತ್ರೆಯಲ್ಲಿ 400 ಜನರು ಆಸ್ಪತ್ರೆ ಸೇವೆ ಪಡೆಯುತ್ತಿದ್ದಾರೆ ಎಂದರು.
ಮೂರು ವರ್ಷದೊಳಗೆ ಜಯದೇವ ಹೃದ್ರೋಗ ಆಸ್ಪತ್ರೆಯು ಕಲಬುರಗಿಯಲ್ಲಿ ಸುಸಜ್ಜಿತ ಸ್ವಂತ ಕಟ್ಟಡದೊಳಗೆ ಕಾರ್ಯಾರಂಭ ಆಗಲಿದೆ. 150 ಕೋಟಿ ವೆಚ್ಚದಲ್ಲಿ 300 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 150 ಕೋಟಿ ರೂ. ನೆರವಿನಿಂದ ನಗರದ ಮುಖ್ಯ ರಸ್ತೆಯ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಆವರಣದ ವಿಶಾಲವಾದ ಏಳು ಎಕರೆ ಜಾಗದಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜಯದೇವ ಆಸ್ಪತ್ರೆ ತಲೆ ಎತ್ತಲಿದೆ. ಈಗ ಕಾರ್ಯನಿರ್ವಹಿಸುತ್ತಿರುವ ಜಾಗ ಕಲಬುರಗಿ ಜಿಲ್ಲಾಸ್ಪತ್ರೆಗೆ ಸೇರಿದ್ದು, ಇಕ್ಕಟ್ಟಾಗಿದೆ. ಸ್ವಂತ ಕಟ್ಟಡವಾದಲ್ಲಿ ಮತ್ತಷ್ಟು ಸೇವೆ ವಿಸ್ತಾರವಾಗಲಿದೆ ಎಂದರು.
ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ದಿನನಿತ್ಯ 350ರಿಂದ 400 ರೋಗಿಗಳನ್ನು ಪರೀಕ್ಷಿಸಲಾಗುತ್ತಿದೆ. ಆರಂಭಗೊಂಡ ಮೂರುವರೆ ವರ್ಷದಲ್ಲಿ ಎರಡು ಲಕ್ಷ ಜನರು ಹೊರ ರೋಗಿಗಳಾಗಿ ಹೃದ್ರೋಗ ಪರೀಕ್ಷೆಯ ವೈದ್ಯಕೀಯ ಸೇವೆ ಪಡೆದಿದ್ದಾರೆ. 16351 ಒಳರೋಗಿಗಳಿಗೆ ಹೃದ್ರೋಗ ಚಿಕಿತ್ಸೆ ನೀಡಿದರೆ, 411 ರೋಗಿಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನೀಡಲಾಗಿದೆ ಎಂದರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಬರುವ ಫೆಬ್ರವರಿಯಲ್ಲಿ ಸಿಎಂ ಯಡಿಯೂರಪ್ಪ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಿದ್ದಾರೆ ಎಂದರು.
ಇದೇ ವೇಳೆ ಆಸ್ಪತ್ರೆಯ ನೂತನ ಕಟ್ಟಡದ ನೀಲಿ ನಕ್ಷೆಯನ್ನು ಡಾ| ಸಿ.ಎನ್.ಮಂಜುನಾಥ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಬಿಡುಗಡೆಗೊಳಿಸಿದರು. ಡಾ| ಬಾಬುರಾವ್ ಹುಡಗೀಕರ್, ಕಾರ್ಡಿಯೋಲಾಜಿ ಮುಖ್ಯಸ್ಥ ಡಾ| ವೀರೇಶ ಪಾಟೀಲ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ತೇಗಲತಿಪ್ಪಿ , ಎಚ್ ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಶರಣು ಪಪ್ಪಾ ಹಾಗೂ ಇನ್ನಿತರರು ಇದ್ದರು.