ಕಲಬುರಗಿ: ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪುಂಡರ ಉಪಟಳಕ್ಕೆ ಕಡಿವಾಣ ಹಾಕಲು ಗೂಂಡಾ ಕಾಯ್ದೆ ಪರಿಣಾಮಕಾರಿ ಬಳಸಿಕೊಂಡು, ಗಡಿಪಾರು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಎಚ್ಚರಿಕೆ ನೀಡಿದರು.
ಆಯುಕ್ತಾಲಯದ ಮೊದಲ ಪೂರ್ಣ ಪ್ರಮಾಣದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಹೆದರಿಕೆ ಮನೋಭಾವ ಇದ್ದು, ಇದನ್ನು ಹೋಗಲಾಡಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿ ಬಡಾವಣೆಗೂ ಪೊಲೀಸರು ಭೇಟಿ ನೀಡಿ, ಜನರ ಸಂಪರ್ಕದಲ್ಲಿ ಇರುತ್ತಾರೆ. ಪ್ರತಿಯೊಂದು ಮನೆಯ ಮೊಬೈಲ್ ಸಂಖ್ಯೆ ಪಡೆಯಲಾಗುವುದು. ಜತೆಗೆ ಆಯಾ ಬಡಾವಣೆಯಲ್ಲಿ ಗಸ್ತಿನಲ್ಲಿರುವ ಪೊಲೀಸ್ ಪೇದೆಯ ನಂಬರ್‌ನ್ನು ಮನೆಯವರಿಗೆ ನೀಡಲಾಗುವುದು. ಕಳ್ಳತನ, ದರೋಡೆ, ಅನಾಹುತ, ಅಹಿತಕರ ಪ್ರಕರಣಗಳಿಗೆ ಸಿಲುಕಿಕೊಂಡ ಜನರು ಶೀಘ್ರವೇ ಪೊಲೀಸರನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ. ಅಲ್ಲದೇ, ಪ್ರತಿ ಮನೆಗೂ ಜಾಗೃತಿ ಮೂಡಿಸುವ ಕರಪತ್ರಗಳನ್ನು ಪೊಲೀಸರು ತಲುಪಿಸಲಿದ್ದಾರೆ ಎಂದರು.
ಸಂಚಾರ ವ್ಯವಸ್ಥೆ ಸುಧಾರಣೆ: ನಗರದಲ್ಲಿ ವಾಹನ ಸಂಚಾರದ ಸಮಸ್ಯೆ ಗಮನಕ್ಕೆ ಬಂದಿದ್ದು, ಸಂಚಾರ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಲಾಗುವುದು. ಸಿಗ್ನಲ್, ಒನ್‌ವೇ ರಸ್ತೆಗಳು, ವಾಹನ ನಿಲ್ದಾಣಗಳ ಬಗ್ಗೆ ಮಾಹಿತಿ ಪಡೆದು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಡ್ಡಾದಿಡ್ಡಿ ಆಟೋ ಚಾಲನೆ ಮತ್ತು ಎಲ್ಲೆಲ್ಲೆಂದರಲ್ಲಿ ಆಟೋ ನಿಲ್ಲಿಸುವುದಕ್ಕೂ ಕಡಿವಾಣ ಹಾಕಲಾಗುವುದು. ಇದಕ್ಕಾಗಿ ಆಟೋ ಚಾಲಕರ ಸಂಘಟನೆಗಳು ಮತ್ತು ಸಾರ್ವಜನಿಕರ ಸಭೆ ನಡೆಸಲಾಗುವುದು. ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಆಟೋದಲ್ಲಿ ಆರಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದಲ್ಲಿ ಆಟೋದ ಆರ್‌ಸಿ ಮತ್ತು ಚಾಲಕರ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.
ಪೊಲೀಸ್ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಡಿ. ಕಿಶೋರಬಾಬು, ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ಸಿ.ಎಚ್. ಇದ್ದರು.