Advertisement

ಮಹಿಳೆ ಪುರುಷರ ಪ್ರತಿಸ್ಪರ್ಧಿ

11:39 AM Mar 07, 2020 | Naveen |

ಕಲಬುರಗಿ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಾ ಪುರುಷರ ಸರಿಸಮಾನವಾಗಿ, ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿದ್ದಾಳೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೊ| ಪರಿಮಳಾ ಅಂಬೇಕರ್‌ ಹೇಳಿದರು.

Advertisement

ನಗರದ ಗೋದುತಾಯಿ ಕಾಲೇಜಿನಲ್ಲಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ಅಡಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮಹಿಳೆಯರು ಕುಟುಂಬದ ಕೆಲಸದೊಂದಿಗೆ ವಿಜ್ಞಾನಿ, ವೈದ್ಯ, ಪೈಲೆಟ್‌, ಶಿಕ್ಷಕಿ, ರಾಜಕಾರಣಿಯಾಗಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೆಜ್ಜೆ ಇಡುತ್ತಾ ಸಮಾಜ ಕಟ್ಟುವಲ್ಲಿ ಪುರುಷರೊಂದಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಲಿಂಗ ತಾರತಮ್ಯ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಇವುಗಳನ್ನು ಹೋಗಲಾಡಿಸಬೇಕಿದೆ. ಸಮಾಜದಲ್ಲಿ ಯಾವುದೇ ತಾರತಮ್ಯ ಇರಕೂಡದು. ಇಂತಹ ಪ್ರಜಾಸತ್ತಾತ್ಮಕ ರಾಷ್ಟ್ರ ನಿರ್ಮಾಣ ಆಗಬೇಕಾದರೆ, ಸಮಾಜದಲ್ಲಿರುವ ಎಲ್ಲ ರೀತಿಯ ಭೇದಭಾವಗಳು ತೊಲಗಬೇಕೆಂದು ಹೇಳಿದರು.

ಕೇವಲ ಕಾನೂನುಗಳಿಂದ ಯಾವುದೇ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸಮಾಜದ ಆಲೋಚನೆ ಬದಲಾಗಿ, ಮಹಿಳೆಯರು ಯಾರಿಗೂ ಕಡಿಮೆಯಿಲ್ಲ ಎಂಬ ಮನೋಭಾವ ಬಂದಾಗ ಮಾತ್ರ ಮಹಿಳೆಯರ ಮುಂದಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಮಹಾ ವಿದ್ಯಾಲಯದ ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಮಾತನಾಡಿ, ಮಹಿಳೆ ಸಬಲಳಾಗುತ್ತಿದ್ದಾಳೆ. ಅವಳಿಗೆ ಸರಿಯಾದ ಗೌರವ ಸಿಗುತ್ತಿಲ್ಲ. ಶರಣಬಸವೇಶ್ವರ ಸಂಸ್ಥಾನದಲ್ಲಿ ಮಹಿಳೆಯರಿಗೆ ಶಿಕ್ಷಣ ಮತ್ತು ಗೌರವವನ್ನು ಸಂಸ್ಥೆ ಮೊದಲಿನ ಕೊಡುತ್ತಾ ಬಂದಿದೆ. ಮೊದಲಿನಿಂದಲೂ ಮಹಿಳೆಯರಿಗಾಗಿಯೇ ಶಿಕ್ಷಣ ನೀಡುತ್ತಾ ಬಂದಿದ್ದು, ಅವರ ಶಿಕ್ಷಣಕ್ಕಾಗಿ ಇಂದಿನ ಪೀಠಾ ಧಿತಿಗಳಾದ ಪೂಜ್ಯ ಡಾ| ಅಪ್ಪ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಹಲವಾರು ಸೌಲಭ್ಯಗಳನ್ನು ಒದಗಿಸಿ ಶಿಕ್ಷಣ ನೀಡುತ್ತಿದ್ದಾರೆ ಎಂದು ಹೇಳಿದರು.

ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ| ಶಾಂತಲಾ ನಿಷ್ಠಿ, ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಶೃತಿ ಎಸ್‌.ಟಿ, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ| ಸೀಮಾ ಪಾಟೀಲ ವೇದಿಕೆಯಲ್ಲಿದ್ದರು. ಡಾ| ಸೀಮಾ ಪಾಟೀಲ ಸ್ವಾಗತಿಸಿದರು. ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಶೃತಿ ಎಸ್‌.ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಪುಟ್ಟಮಣಿ ದೇವಿದಾಸ ನಿರೂಪಿಸಿದರು. ಜಾನಕಿ ಹೊಸುರ ವಂದಿಸಿದರು.

ಕು.ಭುವನೇಶ್ವರಿ ಮತ್ತು ಕು. ರಾಜೇಶ್ವರಿ ಪ್ರಾರ್ಥಿಸಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ನಡೆಸಿದ ಭಾಷಣ, ಕವನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ| ಸಿದ್ಧಮ್ಮ ಗುಡೇದ್‌, ಡಾ| ಇಂದಿರಾ ಶೇಟಕಾರ, ಡಾ| ಎನ್‌.ಎಸ್‌. ಹೂಗಾರ, ಸಾವಿತ್ರಿ ಜಂಬಲದಿನ್ನಿ, ರೇವಯ್ಯ ವಸ್ತ್ರದಮಠ, ಕೃಪಾಸಾಗರ ಗೊಬ್ಬುರ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next