ಕಲಬುರಗಿ: ಮನೋಮಯ ಪ್ರೊಡಕ್ಷನ್ಸ್ ಹಾಗೂ ರಂಗಾಯಣ ಸಹಯೋಗದಲ್ಲಿ ಫೆಬ್ರವರಿ 25 ಮತ್ತು 26ರಂದು “ಕಲಬುರಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಆಯೋಜಿಸಲಾಗಿದೆ ಎಂದು ಫಿಲಂ ಫೆಸ್ಟಿವಲ್ ಸಂಘಟಕರಾದ ಮಹಿಪಾಲರೆಡ್ಡಿ ಮುನ್ನೂರ್, ವೈಭವ ಕೇಸ್ಕರ್ ತಿಳಿಸಿದ್ದಾರೆ.
ಕಲಬುರಗಿ ರಂಗಾಯಣ ಸಭಾಂಗಣದಲ್ಲಿ ನಡೆಯಲಿರುವ ಫಿಲ್ಮ್ ಫೆಸ್ಟಿವಲ್ ಈ ಬಾರಿ ಆರನೇ ವರ್ಷದ ಸಂಭ್ರಮವಾಗಿದ್ದು, ಕಳೆದ ವರ್ಷ 2022 ಮಾರ್ಚ್ 25ರಂದು ಚಿತ್ರೋತ್ಸವ ನಡೆಸಲಾಗಿತ್ತು. ಈ ಫೆಸ್ಟಿವಲ್‌ನ ಅಭೂತಪೂರ್ವ ಯಶಸ್ಸು ಮತ್ತು ಮಹಾನಗರದ ಸಾರ್ವಜನಿಕ, ಮಾಧ್ಯಮದ ಸಹಕಾರದಿಂದ ಜರುಗಿತ್ತು. ಈ ಯಶಸ್ಸಿನಿಂದಾಗಿ ಈ ಬಾರಿ ಎರಡು ದಿನಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೊದಲ ಫಿಲಂ ಫೆಸ್ಟಿವಲ್‌ನಲ್ಲಿ ಎಂಟು ರಾಜ್ಯಗಳಿಂದ 54 ಸಿನಿಮಾ, ಎರಡನೇ ಫೆಸ್ಟಿವಲ್‌ನಲ್ಲಿ 272, 3ನೇ ವರ್ಷದಲ್ಲಿ 220, 4ನೇ ಸಿನಿ ಹಬ್ಬದಲ್ಲಿ 240 ಮತ್ತು ಐದನೇ ವರ್ಷದ ಸಿನಿಮಾ ಉತ್ಸವದಲ್ಲಿ 282 ಸಿನಿಮಾಗಳು ಸ್ಪರ್ಧೆಗೆ ಬಂದಿದ್ದನ್ನು ಸ್ಮರಿಸಿಕೊಂಡು, ಇದುವರೆಗೂ ಚಿತ್ರೋತ್ಸವದ ಜ್ಯೂರಿ ಸದಸ್ಯರಾಗಿ ಅನೇಕ ಸಾಧಕರು ಆಗಮಿಸಿದ್ದರು.
60ಕ್ಕಿಂತ ಹೆಚ್ಚು ಸಿನಿಮಾಗಳ ನಿರ್ದೇಶಕರಾದ ಹಿರಿಯ ಚಲನಚಿತ್ರ ನಿರ್ದೆಶಕರಾದ ಬಿ. ರಾಮಮೂರ್ತಿ, ಹಿರಿಯ ನಟಿ ಚಿತ್ಕಳಾ ಬಿರಾದಾರ, ರಂಗಭೂಮಿ ಹಿರಿಯ ನಟ, ನಿರ್ದೇಶಕ ಯಶವಂತ ಸರ್ ದೇಶಪಾಂಡೆ, ನಿರ್ದೇಶಕಿ ರೂಪಾರಾವ, ಹೈದ್ರಾಬಾದನ ರಾಮನಾಯ್ಡು, ಫಿಲ್ಮ್ ಸ್ಕೂಲನ ಪ್ರೊಫೆಸರ್ ರಾಜಕುಮಾರ ರಾಯ್, ಹಿರಿಯ ನಿರ್ದೇಶಕರಾದ ದಿನೇಶಬಾಬು, ನಟ ರಾಕೇಶ ಅಡಿಗ, ತೆಲುಗು ನಟಿ ಪ್ರಿಯಾನ್ಶಾ ದುಬೆ, ತೆಲುಗು ನಟ ಫಾರುಖ್ ಖಾನ್, ನಿರ್ಮಾಪಕರಾದ ತ್ರಿವಿಕ್ರಮ ಜೋಶಿ, ನಟ ರಾಮಾಚಾರಿ ಜೋಶಿ ಹಾಗೂ ಇತರರು ಭಾಗವಹಿಸಿದ್ದರು.
ಈ ಬಾರಿ ಚಿತ್ರೋತ್ಸವದಲ್ಲಿ ಜನಪ್ರಿಯ ಕಾರ್ಡಿಯೋಲಾಜಿಸ್ಟ್ ಡಾ|ಎಂ.ಆನಂದಕುಮಾರ ಬೆಂಗಳೂರು, ಚಿತ್ರರಂಗದ ನಿರ್ಮಾಪಕರು ಮತ್ತು ಲೇಖಕರಾದ ಎಸ್.ರಾಮಕೃಷ್ಣ, ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದರಾದ ರೋಹಿಣಿ ಅನಂತ್, “ಗುರು ಶಿಷ್ಯರು’ ನಿರ್ದೇಶಕರಾದ ಜಡೇಶಕುಮಾರ ಹಂಪಿ, ಕ್ಯಾಮರಾಮನ್ ಅರೂರ್ ಸುಧಾಕರ ಶೆಟ್ಟಿ, ನಟ ಅವಿನಾಶ ಹೊಯ್ಸಳ, ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ರಾಜ್ಯ ಅಧ್ಯಕ್ಷ ಸಂತೋಷ ಅಂಗಡಿ, “ಮಿಸೆಸ್ ಇಂಡಿಯಾ-2021′ ವಿಜೇತೆ ಡಾ|ಸ್ಮಿತಾ ಪ್ರಭು, ಕವಿತಾ ರಮೇಶ, ಸುಮ ಬಸವರಾಜಯ್ಯ, ರಮೇಶ ಟಕ್ಕಳಕಿ ಸೇರಿದಂತೆ ಅನೇಕರು ಆಗಮಿಸುವರು ಎಂದು
ತಿಳಿಸಿದ್ದಾರೆ.
ನಟ ಸಿ.ಕೆ.ಅಭಿಷೇಕ ಭಾಗಿ
ಪ್ರಸಕ್ತ ಬಾರಿಯ ಸಿನಿಮಾ ಹಬ್ಬದಲ್ಲಿ ನಟ ಸಿ.ಕೆ.ಅಭಿಷೇಕ ಭಾಗವಹಿಸಲಿದ್ದಾರೆ. ಅವರು ಅಭಿನಯಿಸಿದ “ನಿರ್ಮುಕ್ತ’ ಸಿನಿಮಾದ ಪ್ರಮೋಷನ್‌ಗಾಗಿ ಸಿನಿಮಾ ತಂಡವೂ ಆಗಮಿಸಲಿದೆ.
ನಿರ್ವಹಣಾ ಮಂಡಳಿ
ಆರನೇ ವರ್ಷದ ಕಲಬುರಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ವಹಣಾ ಮಂಡಳಿ ರಚಿಸಲಾಗಿದೆ. ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ, ಹಿರಿಯ ಪತ್ರಕರ್ತ, ಸಾಹಿತಿ, ನಟ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಮನೋಮಯ ಮಲ್ಟಿಮೀಡಿಯಾ ಸಿಇಒ ವಿಶಾಲ ಗಡಾಳೆ, ಮನೋಮಯ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ ಸಂಸ್ಥಾಪಕ ವೈಭವ್ ಕೆಸ್ಕರ್ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.