ಕಲಬುರಗಿ: ಕಾನೂನು ಉಲ್ಲಂಘನೆ ಮಾಡುವ ಯತ್ನಕ್ಕೆ ಯಾರೇ ಕೈ ಹಾಕಿದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ಉಲ್ಲಂಘನೆಗೆ ಯತ್ನಿಸುವ ತಮ್ಮ ಸಂಬಂಧಿಕರಾಗಲಿ, ಬೆಂಬಲಿಗರಾಗಲಿ, ಜಾತಿ ಬಾಂಧವರಾಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೇ 5ರಂದು ಯುವಕರನ್ನು ಬೆತ್ತಲೆಗೊಳಿಸಿ ಥಳಿಸಿದ ಘಟನೆಯನ್ನು ತಾವು ವೈಯಕ್ತಿಕವಾಗಿ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಖಂಡಿಸುವುದಾಗಿ ಹೇಳಿದ ಸಚಿವ ಪ್ರಿಯಾಂಕ್, ಈ ಘಟನೆ ಕುರಿತಂತೆ ಬಿಜೆಪಿ ನಾಯಕರು ಸೇರಿದಂತೆ ಕೆಲವು ಸ್ವಯಂಘೋಷಿತ ಸಮಾಜ ಸೇವಕರು ಸರಕಾರವನ್ನು ಮುಜುಗರಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ. ನಾವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವವರಲ್ಲ. ಮೇಲಾಗಿ, ಮೈಗೆ ಎಣ್ಣೆ ಹಚ್ಚಿಕೊಂಡಿಲ್ಲ. ಕೆಲವು ಘಟನೆಗಳು ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ನಡೆಯುತ್ತವೆ. ಎಲ್ಲವೂ ಗೃಹ ಇಲಾಖೆಯ ಗಮನದಲ್ಲಿರಬೇಕು ಎಂದೇನೂ ಇಲ್ಲ. ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ ಸ್ವತಃ ಪೊಲೀಸರ ಗಮನಕ್ಕೆ ಬಂದು ಪೊಲೀಸರೇ ಆರೋಪಿಗಳನ್ನು ಬಂಧಿಸಿದ್ದಾರೆ. ಇದು ಜಿಲ್ಲೆಯ ಆಡಳಿತ ವ್ಯವಸ್ಥೆಯ ಚುರುಕುತನ ತೋರಿಸುತ್ತದೆ ಎಂದರು.
ಬಿಜೆಪಿಯವರು ಐದು ವರ್ಷ ಅಧಿಕಾರದಲ್ಲಿದ್ದಾಗ ಕಾನೂನು ಸುವ್ಯವಸ್ಥೆ ಹಾಳಾಗಿ ಕೊನೆಗೆ ಬಿಜೆಪಿ ಎಬಿವಿಪಿ ಕಾರ್ಯಕರ್ತರು ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದನ್ನು ಬಿಜೆಪಿ ಮುಖಂಡರು ಮರೆತಿದ್ದಾರೆ ಎಂದು ಲೇವಡಿ ಮಾಡಿದರು.
ಜಿಲ್ಲೆಯಲ್ಲಿ ತಾಲಿಬಾನ್ ಆಡಳಿತ ಕೆಲಸ ಮಾಡುತ್ತಿದೆ ಎಂಬ ಸಂಸದ ಉಮೇಶ್ ಜಾಧವ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಡಿಸಿ ಹುದ್ದೆಯಿಂದ ಪಿಯೂನ್ ಹುದ್ದೆಯವರೆಗೆ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿತ್ತು. ಕಲಬುರಗಿಯಲ್ಲಿ ಐಪಿಎಸ್ ಅಧಿಕಾರಿಗಳು ರೌಡಿಗಳ ಜೊತೆಯಿದ್ದದ್ದು ನಿಮಗೆ ಗೊತ್ತಿಲ್ಲವಾ? ಎಂದು ಸಂಸದ ಉಮೇಶ್ ಜಾಧವ್ ಅವರನ್ನು ಪ್ರಶ್ನಿಸಿದರು.
ಬಿಜೆಪಿ ಅವಧಿಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ನಡೆದ ಅಪರಾಧ ಪ್ರಕರಣಗಳ ಪಟ್ಟಿಯೊಂದಿಗೆ ಬಿಜೆಪಿ ನಾಯಕರು ರೌಡಿಗಳೊಂದಿಗೆ ತೆಗೆಸಿಕೊಂಡಿರುವ ಕೆಲವು ಫೋಟೊಗಳನ್ನು ಸಚಿವ ಪ್ರಿಯಾಂಕ್ ಇದೇ ವೇಳೆ ಪ್ರದರ್ಶಿಸಿದರು.
ಇನ್ಮುಂದೆ ಸುಮ್ಮನಿರಲ್ಲ
ಕಳೆದ 9 ತಿಂಗಳಿಂದ ಶ್ರೀರಾಮಸೇನೆಯ ಸಿದ್ದಲಿಂಗ ಸ್ವಾಮೀಜಿ ಬಾಯಿಗೆ ಬಂದಂತೆ ಮಾತನಾಡಿದ್ದನ್ನು ಗಮನಿಸುತ್ತಾ ಬಂದಿದ್ದೇನೆ. ಇನ್ನು ಮುಂದೆ ಯಾವುದನ್ನೂ ಸಹಿಸುವುದಿಲ್ಲ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.
ಆಂದೋಲಾ ಶ್ರೀ ಮೇಲೆ 39 ಪ್ರಕರಣಗಳಿವೆ. ಇಂತಹ ಮನುಷ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಾಕು ಎನ್ನುವುದಾದರೆ ನೀನು ಯಾರು? ಎಂದು ಖಾರವಾಗಿ ಪ್ರಶ್ನಿಸಿದರು.
ಆಂದೋಲಾ ಸ್ವಾಮೀಜಿ ಅವರನ್ನು ಥರ್ಡ್ ರೇಟ್ ಎಂದು ಟೀಕಿಸಿದ ಅವರು, ಅವರನ್ನು ಪ್ರವಚನ ಸೇರಿದಂತೆ ಶುಭ ಕಾರ್ಯಕ್ಕೆ ಯಾರೂ ಕರೆಯುವುದಿಲ್ಲ. ಆದರೆ ಎಲ್ಲಿಯಾದರೂ ಗಲಭೆ ಮಾಡಿಸುವುದಿದ್ದರೆ ಮಾತ್ರ ಅವರನ್ನು ಆಹ್ವಾನಿಸಲಾಗುತ್ತದೆ ಎಂದರು.
ಚಿತ್ತಾಪುರ ಛೋಟಾ ಪಾಕಿಸ್ತಾನ್ ಮಾಡುತ್ತಿದ್ದಾರೆ ಎಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಿದ್ದಲಿಂಗ ಸ್ವಾಮೀಜಿ ದೂರು ನೀಡಿದ್ದರು. ನಾನು ಸಾಕ್ಷಿ-ಪುರಾವೆ ನೀಡುವಂತೆ ಕೇಳಿದ್ದೆ. ಇದುವರೆಗೆ ಪುರಾವೆ ನೀಡಿಲ್ಲ. ಹಾಗಾಗಿ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.