Advertisement

ಇತಿಹಾಸ ರಚನೆಗೆ ರಾಜಕೀಯ ಇಚ್ಛಾ ಶಕ್ತಿ ಮುಖ್ಯ

11:07 AM Nov 06, 2019 | Naveen |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಇತಿಹಾಸ ರಚನೆಗೆ ರಾಜಕೀಯ ಇಚ್ಛಾಶಕ್ತಿಯೂ ಮುಖ್ಯವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ ಹೇಳಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಹೈದ್ರಾಬಾದ ಕರ್ನಾಟಕ ಇತಿಹಾಸ ರಚನಾ ಸಮಿತಿ ಸಂಯುಕ್ತಾಶ್ರಯದಲ್ಲಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಕಾರ್ಯಾಗಾರದ ಸಮಾರೋಪ ಭಾಷಣದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇತಿಹಾಸ ರಚನೆ ತುಂಬಾ ಕಷ್ಟದ ಕೆಲಸ. ಈ ಭಾಗದ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಒಟ್ಟು 225 ವರ್ಷಗಳ ಕಾಲದಲ್ಲಿ ಬಿಟ್ಟು ಹೋದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹೊಣೆ ನಮ್ಮೆಲ್ಲರ ಮೇಲಿದೆ.

ಆದ್ದರಿಂದ ಆರೂ ಜಿಲ್ಲೆಗಳನ್ನು ಒಳಗೊಂಡ ಸ್ಪಷ್ಟ
, ನಿಷ್ಠರ ಮತ್ತು ಸ್ಫೂ ರ್ತಿದಾಯಕ ಇತಿಹಾಸ ರಚನೆ ಆಗಬೇಕು ಎಂದರು. ಇತಿಹಾಸ ಪರಿಚಯಿಸಲು, ಪಠ್ಯಪುಸ್ತಕದಲ್ಲಿ ಅಧಿಕೃತ ಸೇರ್ಪಡೆ ಮಾಡಲು ಮಕ್ಕಳಿಗೆ ತಿಳಿಯುವಂತೆ ಇತಿಹಾಸದ ಲೇಖನಗಳು ಸರಳ ಮತ್ತು ನಿಖರತೆಯಿಂದ ಕೂಡಿರಬೇಕು. ಸಂಸ್ಕೃತಿ-ಮತದ ಮೇಲಿನ ಅಭಿಮಾನದಿಂದ ಆಚೆ ನಿಂತು ರಚನೆ ಬರಬೇಕು. ಈ ಹಿಂದಿನ ಇತಿಹಾಸ ರಚನೆ ಸಮರ್ಪಕವಾಗಿಲ್ಲದ ಕಾರಣ ಮರುರಚನೆಗೆ ಸಮಿತಿ ಮಾಡಲಾಗಿದೆ.

ಹಿಂದಿನ ತಪ್ಪೇ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು. ಹೈದ್ರಾಬಾದ ನಿಜಾಮರ ಬಗ್ಗೆ ಬಹಳಷ್ಟು ತಪ್ಪು ಸಂದೇಶಗಳು ಇದೆ. ಅಂದಿನ ಕಾಲದಲ್ಲಿ ನಿಜಾಮರು ಆಯಾ ಪ್ರದೇಶದ ಮಾತೃ ಭಾಷೆಗಳಾದ ಕನ್ನಡ, ತೆಲಗು, ಮರಾಠಿಯಲ್ಲಿ ಕಲಿಯಲು ಅವಕಾಶ ಮಾಡಿಕೊಟ್ಟಿದ್ದರು. ಹೈದ್ರಾಬಾದ್‌ನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕ್ಕೋತ್ತರ ಕೇಂದ್ರ ತೆರೆದು ಕನ್ನಡಕ್ಕೆ ಮಹತ್ವ ನೀಡಿದವರಾಗಿದ್ದಾರೆ. ಸ್ವಾತಂತ್ರ್ಯದ ನಂತರ ಕಾಸಿಂ ರಜ್ವಿಯ ದುರಾಡಳಿತ ಹೊರತುಪಡಿಸಿದರೆ ನಿಜಾಮರು ಈ ಪ್ರದೇಶಕ್ಕೆ ಕಲೆ, ಸಾಹಿತ್ಯ, ಸಾಮರಸ್ಯದ ಆಡಳಿತ, ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಯಾರೂ ಮರೆಯಬಾರದು ಎಂದರು.

Advertisement

ಆರಂಭದಲ್ಲಿ ಮಾತೃ ಭಾಷೆಯಲ್ಲೇ ಮಾಧ್ಯಮಿಕ ಶಾಲೆಗಳು ನಡೆಯುತ್ತಿದ್ದು, ಪ್ರೌಢ ಶಾಲೆ ಆರಂಭಿಸಿದಾಗ ನಾನು ಮೊದಲ ಬ್ಯಾಚ್‌ನ ಮಾತೃಭಾಷಾ ವಿದ್ಯಾರ್ಥಿ ಆಗಿದ್ದೆ ಎಂದು ಸ್ಮರಿಸಿದ ಅವರು, ಇತಿಹಾಸವನ್ನು ಒಂದೇ ಮಗ್ಗುಲಲ್ಲಿ ನೋಡಬಾರದು ಎಂದು ಎಚ್ಚರಿಸಿದರು.

ಇತಿಹಾಸ ರಚನಾ ಸಮಿತಿ ಅಧ್ಯಕ್ಷರಾಗಿದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಡೀನ್‌ ಲಕ್ಷ್ಮಣ ರಾಜನಾಳಕರ ಮಾತನಾಡಿದರು. ಸಮಿತಿ ಸಂಚಾಲಕ ಲಕ್ಷ್ಮಣ ದಸ್ತಿ, ನಿವೃತ್ತ ಪ್ರಾಧ್ಯಾಪಕ ಪ್ರೊ| ಡಿ.ಸಿ. ಮಹಾಬಲೇಶ್ವರಪ್ಪ ಇವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ| ಸಂಜೀವಕುಮಾರ, ವಿತ್ತಾಧಿಕಾರಿ ಡಿ.ವಿಜಯ ಹಾಗೂ ಆರು ಜಿಲ್ಲೆಗಳಿಂದ ಆಗಮಿಸಿದ ನೂರಾರು ಸಂಖ್ಯೆಯ ಇತಿಹಾಸ ತಜ್ಞರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next