ಕಲಬುರಗಿ: ಗುಲಬರ್ಗಾ ವಿವಿ ಮತ್ತೊಂದು ಯಡವಟ್ಟು ಮಾಡಿದ್ದು, ಮಾ.7ರಂದು ನಡೆಯಬೇಕಿದ್ದ ಬಿಇಡಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಶುಕ್ರವಾರವೇ ವಿತರಿಸಿದೆ. ಇದರಿಂದ ಶುಕ್ರವಾರ ಒಂದು ಗಂಟೆ ಪರೀಕ್ಷೆ ತಡವಾಗಿ ನಡೆಯುವಂತಾಯಿತು.
ಗುವಿವಿ ವ್ಯಾಪ್ತಿಯ 26 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಬಿಇಡಿ ನಾಲ್ಕನೇ ಸೆಮಿಸ್ಟರ್‌ನ ಗಣಿತ ಮೆಥೆಡ್-2 ಪರೀಕ್ಷೆ ನಡೆಯಬೇಕಿತ್ತು. ಆದರೆ, ಮೆಥೆಡ್-2 ಪ್ರಶ್ನೆ ಪತ್ರಿಕೆ ಬದಲಾಗಿ ಮೆಥೆಡ್-1 ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರಶ್ನೆ ಪತ್ರಿಕೆ ಕಂಡ ತಕ್ಷಣವೇ ಸ್ವತಃ ವಿದ್ಯಾರ್ಥಿಗಳೇ ಗೊಂದಲಕ್ಕೀಡಾದರು. ಬಳಿಕ ಎಚ್ಚೆತ್ತುಕೊಂಡು ಗಣಿತ ಮೆಥೆಡ್ -2 ಪ್ರಶ್ನೆ ಪತ್ರಿಕೆ ನೀಡಲಾಯಿತು.
ಕಲಬುರಗಿ ಜಿಲ್ಲೆಯಲ್ಲಿ 13, ಬೀದರ ಜಿಲ್ಲೆಯಲ್ಲಿ 8, ರಾಯಚೂರು ಜಿಲ್ಲೆಯಲ್ಲಿ 3 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 2 ಪರೀಕ್ಷಾ ಕೇಂದ್ರಗಳಲ್ಲಿ 4995 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಇದೇ ರೀತಿಯ ಅವಾಂತರ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು?: ಬಿಇಡಿ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 9555 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಬಿಇಡಿ ನಾಲ್ಕನೇ ಸೆಮಿಸ್ಟರ್‌ನ ಗಣಿತ ಮೆಥೆಡ್-2 ಪರೀಕ್ಷೆ ಇತ್ತು. ಶನಿವಾರ ಮೆಥೆಡ್-1 ಪರೀಕ್ಷೆ ನಿಗದಿಯಾಗಿತ್ತು. ಆದರೆ, ಶುಕ್ರವಾರವೇ ಮೆಥೆಡ್-1 ಪರೀಕ್ಷೆ ಎಂದು ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ರವಾನಿಸಲಾಗಿದೆ. ಹೀಗಾಗಿ ಮೆಥೆಡ್- 2ರ ಬದಲಾಗಿ ಮೆಥೆಡ್-1ರ ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳ ಕೈಸೇರಿದೆ.
ಪ್ರಶ್ನೆ ಪತ್ರಿಕೆ ಬದಲಾಗಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಅವುಗಳನ್ನು ತಕ್ಷಣವೇ ವಾಪಸ್ ಪಡೆಯಲಾಯಿತು. ನಂತರ ನೋಡಲ್ ಸೆಂಟರ್ ಗಳಿಂದ ಮೆಥೆಡ್-2ರ ಪ್ರಶ್ನೆ ಪರೀಕ್ಷೆ ತರಿಸಿ ವಿತರಿಸಲಾಯಿತು. ಇದರಿಂದ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ 3 ಗಂಟೆಗೆ ಆರಂಭವಾಯಿತು ಎಂದು ಮೌಲ್ಯಮಾಪನ ಕುಲಸಚಿವ ಪ್ರೊ| ಸಂಜೀವಕುಮಾರ ಹೇಳಿದ್ದಾರೆ.
ಮಾ.7ರಂದು ನಡೆಯುವ ಗಣಿತ ಮೆಥೆಡ್-1ರ ಪರೀಕ್ಷೆಗೆ ಬೇರೆಯದ್ದೇ ಸೆಟ್ ಪ್ರಶ್ನೆಪತ್ರಿಕೆ ತಯಾರಿಸಲಾಗಿದ್ದು, ಹೊಸ ಸೆಟ್ ಪ್ರಶ್ನೆಪತ್ರಿಕೆ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.