Advertisement

ಪೌರತ್ವ ತಿದ್ದುಪಡಿ ಮಸೂದೆಗೆ ಪರ-ವಿರೋಧ

04:16 PM Dec 19, 2019 | Naveen |

ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆ ಕಾಯ್ದೆ ವಿರೋಧಿಸಿ ಗುಲಬರ್ಗಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ನೇತೃತ್ವದಲ್ಲಿ ವಿವಿ ಕಾರ್ಯಸೌಧ ಎದುರು ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಪ್ರತಿಭಟನಾಕಾರರು ಕುಲಪತಿಗಳ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿ, ಸಿಎಬಿ ಹಾಗೂ ಎನ್‌ಆರ್‌ಸಿ ಮಸೂದೆಗಳನ್ನು ಕೈಬಿಡಬೇಕು. ವಿದೇಶದಿಂದ ಬಂದ ನಿರಾಶ್ರಿತರ ಮತ್ತು ಕಾನೂನು ಬಾಹಿರ ವಿದೇಶಿ ನಿವಾಸಿಗಳ ಮೇಲೆ ಮಾತ್ರ ಈ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ದೇಶದ ಭದ್ರತೆ ನೆಪವೊಡ್ಡಿ ಎಫ್ಆರ್‌ಡಿಐ ಕಾಯ್ದೆ ಮೂಲಕ ಠೇವಣಿ ಆಗಿರಿಸಿದ ಹಣ ನಿರ್ಬಂಧಿಸುವುದನ್ನು ಕೈಬಿಡುವಂತೆ ಒತ್ತಾಯಿಸಿದರು.

ಕೇಂದ್ರ ಬಿಜೆಪಿ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ವಿಫ‌ಲವಾಗಿದೆ. ರಾಷ್ಟ್ರೀಯ ಉತ್ಪನ್ನವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕುಸಿದಿದೆ. ಷೇರು ಮಾರುಕಟ್ಟೆಯಲ್ಲಿ 13 ಲಕ್ಷ ಕೋಟಿ ರೂ. ಕರಗಿ ಹೋಗಿವೆ. ಕಾರ್ಖಾನೆಗಳು ಮುಚ್ಚಿಹೋಗಿವೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ.

ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ. ಜನತೆ ಆದಾಯ ಕಡಿಮೆಯಾಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ 79ಕ್ಕೆ ಏರಿದೆ. ಈರುಳ್ಳಿ, ಪೆಟ್ರೋಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ದೇಶದ ಆರ್ಥಿಕತೆಗೆ ಪೆಟ್ಟುಕೊಟ್ಟಿದೆ. ಏಳುವರೆ ಲಕ್ಷ ಕೋಟಿ ರೂ.ಗಳ ಕೊರತೆ ಬಜೆಟ್‌ ಮಂಡನೆ ಮಾಡಲಾಗಿದೆ. ಬ್ಯಾಂಕ್‌ಗಳು ದಿವಾಳಿ ಅಂಚಿಗೆ ತಲುಪಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕಿನಲ್ಲಿ ಕೂಡಿಟ್ಟ ಒಂದು ಲಕ್ಷ ಕೋಟಿ ರೂ.ಗಳನ್ನು ಬಿಜೆಪಿ ಬೆಂಬಲಿಗರು ಲೂಟಿ ಮಾಡಿದ್ದಾರೆ. ಇವೆಲ್ಲ ವೈಫ‌ಲ್ಯಗಳನ್ನು ಮರೆಮಾಚಲು ಪೌರತ್ವ ಮಸೂದೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಆಪಾದಿಸಿದರು.

Advertisement

ಈಗಾಗಲೇ ಪೌರತ್ವ ಮಸೂದೆ ವಿರುದ್ಧ ರಾಷ್ಟ್ರವ್ಯಾಪಿ ಉಗ್ರ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಯಲ್ಲಿ ಆಸ್ಸಾಂನಲ್ಲಿ ಹಲವರು ಮೃತಪಟ್ಟಿದ್ದಾರೆ. ಜಾಮೀಯಾ ವಿವಿಯಲ್ಲಿ ಕುಲಪತಿಗಳ ಅನುಮತಿ ಪಡೆಯದೇ ಪೊಲೀಸರು ವಿವಿ ಒಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಅಲಿಘಡ ವಿವಿಯಲ್ಲೂ ಹಲ್ಲೆಗಳು ನಡೆದಿವೆ. ಇವೆಲ್ಲ ಹಿಂಸಾಚಾರ ಬಿಟ್ಟು, ಕೂಡಲೇ ಮಸೂದೆ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಬಾಬುರಾವ್‌ ಎಸ್‌. ಬೀಳಗೆ, ಉಪಾಧ್ಯಕ್ಷ ಕೆ. ಮಹೇಶ, ಚಿರಂಜೀವಿ ಬಬಲಾದಕರ್‌, ಉಮೇಶ ಎಸ್‌. ವಾಲೀಕಾರ, ಸುಹಾಸ ಸೂರ್ಯನವರ್‌, ಆಕಾಶ ಮೇಟಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next