Advertisement
ಕಲಬುರಗಿ, ಆಳಂದ, ಅಫಜಲಪುರ, ಕಮಲಾಪುರ, ಕಾಳಗಿ ಹಾಗೂ ಶಹಾಬಾದ್ ತಾಲೂಕುಗಳಲ್ಲಿ 2,096 ಸ್ಥಾನಗಳಿಗೆ ಬಿರುಸಿನಿಂದ ಮತದಾನ ನಡೆಯುತ್ತಿದೆ. 141 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, 2,096 ಸ್ಥಾನಗಳಿಗೆ 5,876 ಜನ ಕಣದಲ್ಲಿದ್ದಾರೆ.
Related Articles
Advertisement
ಕಲಬುರಗಿ ತಾಲೂಕಿನ ಕರಿಭೋಸಗಾ, ಪಟ್ಟಣ ಗ್ರಾಮಗಳು ಹಾಗೂ ಆಳಂದ ತಾಲೂಕಿನ ಕಡಗಂಚಿ, ನರೋಣಾ, ಶಹಾಬಾದ್ ತಾಲೂಕಿನ ಮರತೂರ ಸೇರಿ ಹಲವು ಗ್ರಾಮಗಳಲ್ಲಿ ಜನರು ತಂಡೋಪತಂಡವಾಗಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿದ್ದಾರೆ. ವೃದ್ಧರು, ಮಹಿಳೆಯರು, ಯುವಕ-ಯುವತಿಯರು ಮತದಾನದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ;ಲಂಡನ್ ನಿಂದ ಬಂದ ಮಹಿಳೆಗೆ ಕೋವಿಡ್ ಭೀತಿ: ಬೆಳಗಾವಿ ಜನರಲ್ಲಿ ಹೆಚ್ಚಿದ ಆತಂಕ
ಅದರಲ್ಲೂ ಈ ಬಾರಿ ಅನೇಕ ಕಡೆಗಳಲ್ಲಿ ಯುವಕರೇ ಅತಿ ಹೆಚ್ಚಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಚುನಾವಣೆ ಪೈಪೋಟಿಯಿಂದ ಕೂಡಿದೆ. ಯುವ ಮತದಾರರು, ಮೊದಲ ಬಾರಿ ಮತ ಚಲಾವಣೆ ಮಾಡುವವರ ಸಾಲೇ ಮತಗಟ್ಟೆಗಳು ಮುಂದೆ ಇದೆ. ಜತೆಗೆ ಮನೆಯಲ್ಲಿನ ಹಿರಿಯರನ್ನು ಕರೆದುಕೊಂಡು ಬಂದು ಮತ ಚಲಾವಣೆ ಮಾಡಿಸುತ್ತಿದ್ದಾರೆ.
ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಿಂತಿದ್ದಾರೆ. ಈ ಹಿಂದೆ ನಿಂತು ಚುನಾವಣೆಯಲ್ಲಿ ಗೆದ್ದರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈಗ ಯುವಕರು ಸ್ಪರ್ಧೆ ಮಾಡಿರುವುದರಿಂದ ಮತ್ತಷ್ಟು ಅಭಿವೃದ್ಧಿಯ ನಿರೀಕ್ಷೆ ಇದೆ. ಅಭಿವೃದ್ಧಿ ಪರವಾದ ಅಭ್ಯರ್ಥಿಗೆ ಮತ ಚಲಾವಣೆ ಮಾಡಿದ್ದೇವೆ. ಮೇಲಾಗಿ ಮತದಾನ ನಮ್ಮ ಹಕ್ಕು ಅದನ್ನು ನಾವು ಇವತ್ತು ಚಲಾವಣೆ ಮಾಡಿದ್ದೇವೆ ಎಂದು ಯುವ ಮತದಾರರಾದ ಜ್ಯೋತಿ, ಅಂಬಿಕಾ, ಪ್ರಿಯಾ, ಅಭಿಷೇಕ್ ಕುಮಾರ್ ಹೇಳಿದರು.
ವಾಹನಗಳ ವ್ಯವಸ್ಥೆ: ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ತಮ್ಮ ಗ್ರಾಮದಿಂದ ದುಡಿಯಲು ಬೆಂಗಳೂರು, ಮುಂಬೈ, ಪುಣೆ, ಕಲ್ಯಾಣ್ ಮುಂತಾದ ಕಡೆಗಳಿಗೆ ತೆರಳಿದ ಜನರಿಗಾಗಿ ವಾಹನಗಳ ವ್ಯವಸ್ಥಗಳ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ವಾಹನಗಳನ್ನು ಕಳುಹಿಸಿ ಮತದಾರರನ್ನು ಕರೆಸಿಕೊಂಡಿದ್ದಾರೆ.
ಪಟ್ಟಣ ಹಾಗೂ ನರೋಣಾ ಗ್ರಾಮ ಪಂಚಾಯಿತಿಯ ಅಭ್ಯರ್ಥಿಗಳು ಜನರನ್ನು ಕರೆಸಿಕೊಂಡಿದ್ದಾರೆ. ಸೋಮವಾರ ರಾತ್ರಿಯೇ ಜನರು ಮುಂಬೈ, ಪುಣೆಯಿಂದ ಹೊರಟಿದ್ದು, ಮಧ್ಯಾಹ್ನದ ವೇಳೆಗೆ ಗ್ರಾಮಗಳಿಗೆ ತಲುಪಿದ್ದಾರೆ. ಅಲ್ಲದೇ, ಮತದಾರರಿಗಾಗಿ ಮನೆಯಿಂದ ಮತಗಟ್ಟೆಗಳಿಗೆ ಕರೆ ತರಲೂ ವಾಹನಗಳು, ಟಂಟಂ, ಆಟೋಗಳ ವ್ಯವಸ್ಥೆ ಮಾಡಲಾಗಿದೆ.
ಎರಡು ಕಡೆ ಚಿಹ್ನೆ ಬದಲು: ಈ ನಡುವೆ ಕಮಲಾಪುರ ತಾಲೂಕಿನ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳ ಚಿಹ್ನೆಗಳು ಬದಲಾವಣೆಯಾಗಿ, ಕೆಲ ಗೊಂದಲ ಉಂಟಾಯಿತು. ಅಲ್ಲದೇ, ಎರಡೂ ಕಡೆಗಳಲ್ಲಿ ಮತದಾನ ಸಹ ಸ್ಥಗಿತಗೊಳಿಸಿದ ಪ್ರಸಂಗ ಸಹ ನಡೆದಿದೆ.
ಶ್ರೀಚಂದ್ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್ ನಲ್ಲಿ ಅಭ್ಯರ್ಥಿ ಗಜಾನಂದ ದತ್ತಾಪ್ರಸಾದ ಎಂಬುವವರು ‘ಹಲ್ಲುಜ್ಜುವ ಪೇಸ್ಟ್ ಚಿಹ್ನೆ’ ಪಡೆದು ಪ್ರಚಾರ ಮಾಡಿದ್ದರು. ಆದರೆ ಮತ ಪತ್ರದಲ್ಲಿ ಹಲ್ಲುಜ್ಜುವ ಬ್ರಷ್ ಪ್ರಿಂಟ್ ಇದೆ. ಇದರಿಂದ ಅಭ್ಯರ್ಥಿ ಗಜಾನಂದ ತಕರಾರು ತೆಗೆದರು. ಹೀಗಾಗಿ ಕೆಲಕಾಲ ಮತದಾನ ಸ್ಥಗಿತಗೊಳಿಸಲಾಗಿತ್ತು.
ಅದೇ ರೀತಿ ಕಿಣ್ಣಿ ಸಡಕ್ ಗ್ರಾಮ ಪಂಚಾಯಿತಿಯ 7ನೇ ವಾರ್ಡ್ ನಲ್ಲೂ ಚಿಹ್ನೆ ಬದಲಾವಣೆ ಆಗಿದೆ. ಜಯರಾಜ ಎ. ಹಲಗಿ ಅವರಿಗೆ 145 ತುತ್ತೂರಿ ಚಿಹ್ನೆ ನೀಡಲಾಗಿತ್ತು. ಇದೆ ಚಿಹ್ನೆ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ಆದರೆ ಮತಪತ್ರದಲ್ಲಿ 181 ಕಹಳೆ ಊದುತ್ತಿರುವ ಮನುಷ್ಯನ ಚಿಹ್ನೆ ಮುದ್ರಣಗೊಂಡಿದೆ.
ಅಭ್ಯರ್ಥಿ ಜಯರಾಜ ಮತ ಚಲಾಯಿಸಲು ಹೋದಾಗ ಬದಲಿ ಚಿಹ್ನೆ ಕಂಡು ಗಾಬರಿಗೊಂಡಿದ್ದಾರೆ. ನಂತರ ಚಿಹ್ನೆ ಬದಲಾವಣೆ ಬಗ್ಗೆ ಗಮನಿಸಿ ಮತಗಟ್ಟೆ ಅಧಿಕಾರಿಗೆ ತಿಳಿಸಿದರು. ಆಗ ತಕ್ಷಣ ಮತದಾನ ಸ್ಥಗಿತ ಗೊಳಿಸಲಾಯಿತು. ಚುನಾವಣಾಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರತಿಭಟಿಸಿದ ಅಭ್ಯರ್ಥಿ ಕಣ್ಣೀರು ಸಹ ಹಾಕಿದರು.