ಕಲಬುರಗಿ: ನಗರದ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಲೋಕೋಪಯೋಗಿ ಗೆಸ್ಟ್ ಹೌಸ್ ಆವರಣದಲ್ಲಿ ನಿಲ್ಲಿಸಿರುವ ತಹಶೀಲ್ದಾರ ಸೇರಿದಂತೆ ಇತರೆ ಅಧಿಕಾರಿಗಳ ಸರಕಾರಿ ವಾಹನಗಳನ್ನು ಕಿಡಿಗೇಡಿ ಕುಡುಕರು ಜಖಂ ಮಾಡಿರುವ ಘಟನೆ ಜು.30ರ ಮಂಗಳವಾರ ರಾತ್ರಿ ನಡೆದಿದೆ.
ಅಂದಾಜು 10ಕ್ಕೂ ಹೆಚ್ಚು ಸರಕಾರಿ ಹಾಗೂ ಖಾಸಗಿ ವಾಹನಗಳು ಜಖಂಗೊಂಡಿವೆ. ತಹಶೀಲ್ದಾರ ವಿಜಯಕುಮಾರ ಹಾಗೂ ಇತರೆ ಅಧಿಕಾರಿಗಳ ವಾಹನಗಳು ಇದರಲ್ಲಿ ಸೇರಿವೆ.
ಕೆಲ ವ್ಯಕ್ತಿಗಳು ಗೆಸ್ಟ್ ಹೌಸ್ ಆವರಣದಲ್ಲಿಯೇ ಕುಡಿದು ಬಾಟಲಿಗಳನ್ನು ಎಲ್ಲಿ ಬೇಕಂದರಲ್ಲಿ ಬೀಸಾಡಿದ್ದಾರೆ. ಬಳಿಕ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ. ಆವರಣದಲ್ಲಿ ಹೊರಗಿನ ವ್ಯಕ್ತಿಗಳು ಬಂದು ಮೋಜು-ಮಸ್ತಿ ಮಾಡುವುದು ಸಾಮಾನ್ಯವಾಗಿದೆ.
ಪ್ರಕರಣದ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.