ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿ ಜಿಲ್ಲೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.
ಜಿಲ್ಲೆಯ ಸೇಡಂ ಕ್ಷೇತ್ರದಿಂದ ನಾಲ್ಕು ಸಲ ಗೆದ್ದಿರುವ ಡಾ. ಶರಣಪ್ರಕಾಶ ಪಾಟೀಲ್ ಶನಿವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕಲಬುರಗಿಗೆ ಎರಡನೇ ಸಚಿವ ಸ್ಥಾನದ ಭಾಗ್ಯ ಲಭಿಸಿತು.
ಈ ಹಿಂದೆ 2013-18ನೇ ಅವಧಿಯಲ್ಲೂ ಸಿದ್ದರಾಮಯ್ಯ ಸಂಪುಟದಲ್ಲೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿರುವ ಡಾ. ಶರಣಪ್ರಕಾಶ ಈ ಸಲ ಸೇಡಂ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಧಿಕ 43 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಚುನಾಯಿತರಾಗಿರುವ ಮೂಲಕ ಗಮನ ಸೆಳೆದಿದ್ದಾರೆ.
ಕಲಬುರಗಿ ಜಿಲ್ಲಾ ಯುವ ಘಟಕದ ಅಧ್ಯಕ ಹಾಗೂ ಜಿಲ್ಲೆಯ ಮಳಖೇಡ ಜಿಲ್ಲಾ ಪಂಚಾಯತ್ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಡಾ. ಶರಣಪ್ರಕಾಶ ಪಾಟೀಲ್, 2002 ರಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ ಮೊದಲ ಬಾರಿಗೆ ಸೇಡಂ ಕ್ಷೇತ್ರದಿಂದ ಜಯ ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ತದನಂತರ 2008 ಹಾಗೂ 2013 ರಲ್ಲಿ ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಮೂರನೇ ಸಲ ಗೆದ್ದಾಗ ವೈದ್ಯಕೀಯ ಶಿಕ್ಷಣ ಸಚಿವ ಜತೆಗೆ ರಾಯಚೂರು ಜಿಲ್ಲಾ ತದನಂತರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ನಿರ್ವಹಣೆ ಸಂದರ್ಭದಲ್ಲೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2018ರಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಪರಾಭವಗೊಂಡ ಡಾ. ಶರಣಪ್ರಕಾಶ ಪಾಟೀಲ್ ಈಗ ಗೆಲುವು ಸಾಧಿಸಿ ನಾಲ್ಕನೇ ಸಲ ಗೆಲುವು ಸಾಧಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪರಮಾಪ್ತರಾಗಿರುವ ಡಾ. ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಪದವೀಧರರು. ಈಗ ಸಿದ್ದರಾಮಯ್ಯ ಸಂಪುಟದಲ್ಲಿ ಸೇರ್ಪಡೆ ಮುಖಾಂತರ ಸಂಪುಟದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.