ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಬ್ಬ ವೃದ್ಧ ತುತ್ತಾಗಿರುವುದು ಗುರುವಾರ ದೃಢಪಟ್ಟಿದೆ.ಇದರೊಂದಿಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ನಗರದ ಇಸ್ಲಾಮಾಬಾದ ಕಾಲೋನಿಯ 61 ವರ್ಷದ ವೃದ್ಧ (ಕ 10270) ಮೃತಪಟ್ಡಿದ್ದು, ಗುರುವಾರ ಪ್ರಯೋಗಾಲಯದ ವರದಿಯಿಂದ ಕೋವಿಡ್ ದೃಢವಾಗಿದೆ. ಕೆಮ್ಮು, ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡ ಹಿನ್ನೆಲೆಯಲ್ಲಿ ವೃದ್ಧ ಜೂ. 22ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂ.23ರಂದು ಅಸುನೀಗಿದ್ದರು. ಕೋವಿಡ್ ಲಕ್ಷಣಗಳ ಹಿನ್ನೆಲೆಯಲ್ಲಿ ಗಂಟಲು ದ್ರಾವಣ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಆದರೆ, ವೃದ್ಧನಿಗೆ ಹೇಗೆ ಸೋಂಕು ಅಂಟಿತ್ತು ಎಂದು ಇನ್ನೂ ಗೊತ್ತಾಗಿಲ್ಲ.