ಕಲಬುರಗಿ: ಮಹಾರಾಷ್ಟ್ರದಿಂದ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಕಾರಣ ಜಿಲ್ಲೆಯಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಗೆ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ತಡರಾತ್ರಿ ಹಿರಿಯ ಅಧಿಕಾರಿಗಳೊಂದಿಗೆ ತೆರಳಿ ಸೊನ್ನ ಬ್ಯಾರೇಜ್ ವೀಕ್ಷಿಸಿದ ಜಿಲ್ಲಾಧಿಕಾರಿ, ಇಂಜಿನಿಯರ್ ಗಳಿಂದ ಬ್ಯಾರೇಜ್ ನಲ್ಲಿರುವ ನೀರಿನ ಸಂಗ್ರಹ ಸಾಮರ್ಥ್ಯ, ಒಳಹರಿವು ಮತ್ತು ಹೊರಹರಿವಿನ ಬಗ್ಗೆ ಮಾಹಿತಿ ಪಡೆದರು. ನಂತರ ಅಫಜಲಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಾಳಜಿ ಕೇಂದ್ರ ಹಾಗೂ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನ್ ಅತುಲ್, ಜಿಪಂ ಸಿಇಓ ಡಾ. ಪಿ.ರಾಜಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ಹಾಗೂ ಅಧಿಕಾರಿಗಳು ಇದ್ದರು.
ಇದನ್ನೂ ಓದಿ:ಉತ್ತರದಲ್ಲಿ ತಗ್ಗದ ನೆರೆ ; 8 ಸಾವಿರ ಮಂದಿ ಅತಂತ್ರ, 7 ಸಾವು
ಉಂಟಾಗುವ ಪ್ರವಾಹ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ತೊಂದರೆಗೊಳಗಾಗುವ ಗ್ರಾಮಗಳಿಗೆ ಜಿಲ್ಲಾಡಳಿತ ಅಧಿಕಾರಿಗಳನ್ನು ನಿಯೋಜಿಸಿದೆ. ಜೇವರ್ಗಿ, ಚಿತ್ತಾಪುರ, ಅಫಜಲಪುರ, ಕಲಬುರಗಿ ತಾಲೂಕುಗಳಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗ್ರಾಮಸ್ಥರ ಸ್ಥಳಾಂತರಕ್ಕೆ ಒಟ್ಟು 27 ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು 4ರಿಂದ 6 ಹಳ್ಳಿಗಳ ಉಸ್ತುವಾರಿ ನೋಡಿಕೊಳ್ಳಲಿದ್ದು, ಕಾಳಜಿ ಕೇಂದ್ರ, ರಕ್ಷಣಾ ಕಾರ್ಯ ಮುಂತಾದವುಗಳ ಮೇಲ್ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜನರ ಸ್ಥಳಾಂತರ ಕಾರ್ಯಕ್ಕೆ ಉಡುಪಿ, ಬಳ್ಳಾರಿ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಬೋಟ್ ಗಳು ಹಾಗೂ ರಕ್ಷಣಾ ತಂಡಗಳ ವ್ಯವಸ್ಥೆ ಮಾಡಲಾಗುತ್ತಿದೆ. ದಾವಣಗೆರೆಯಿಂದ ಹಾಗೂ ಮಂಗಳೂರಿನಿಂದ ಎಸ್ ಡಿಆರ್ ಎಫ್ ತಂಡ ಬರಲಿವೆ. ಈಗಾಗಲೇ ಜಿಲ್ಲೆಯ 8 ಕಡೆ ಅಗ್ನಿಶಾಮಕ ಇಲಾಖೆಯ ಜಲವಾಹನ ಹಾಗೂ ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.