ಕಲಬುರಗಿ: ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಬಂದು ಗೌಪ್ಯವಾಗಿ ಮನೆಯಲ್ಲಿ ಕುಳಿತವರಿಗೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಕೆ ಸಂದೇಶ ರವಾನಿಸಿದ್ದು, ಸ್ವಯಂಪ್ರೇರಿತರಾಗಿ ಕೋವಿಡ್ 19 ಸೋಂಕು ತಪಾಸಣೆಗೆ ಒಳಪಡಬೇಕೆಂದು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಆತಂಕ ಹೆಚ್ಚಾದ ಕಾರಣ ಜಿಲ್ಲಾಡಳಿತ ಪ್ರತಿ ದಿನವೂ ವಿದೇಶದಿಂದ ಬಂದವರ ಬಗ್ಗೆ ಮಾಹಿತಿ ಸಂಗ್ರಹಿಸಲು ಹರಸಾಹಸ ಪಡುತ್ತಿದೆ. ಆದರೂ, ಕೆಲವರು ಹೊರ ದೇಶದಿಂದ ಬಂದು ಮನೆಗಳನ್ನು ಸೇರಿರುವುದು ಭೀತಿ ಹೆಚ್ಚು ಮಾಡಿದೆ. ಹೀಗಾಗಿ ಸರ್ಕಾರದಿಂದಲೇ ಹೊರ ದೇಶದಿಂದ ಮರಳಿದವರ ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳವುದು ಅನಿವಾರ್ಯವಾಗುತ್ತದೆ ಎಂದು ಡಿಸಿ ಶರತ್ ಬಿ. ಎಚ್ಚರಿಸಿದ್ದಾರೆ.
ಕೋವಿಡ್ 19 ಸೋಂಕು ಹೆಚ್ಚಾಗಿ ವಿದೇಶದಿಂದ ಬಂದವರಿಂದಲೇ ಕಂಡುಬರುತ್ತಿರುವುದರಿಂದ ಹೊರಗಡೆಯಿಂದ ಬಂದವರು ಮನೆಯಲ್ಲಿ ಗೌಪ್ಯವಾಗಿರಬಾರದು. ಪ್ರವಾಸ ಹಾಗೂ ಕೆಲಸಕ್ಕೆಂದು ಹೊರದೇಶಕ್ಕೆ ಹೋಗಿ ಕಳೆದ ಒಂದು ತಿಂಗಳಿನಿಂದ ಇಂದಿನವರೆಗೂ ಜಿಲ್ಲೆಗೆ ವಾಪಸ್ಸಾದವರು ಸ್ವಯಂಪ್ರೇರಿತರಾಗಿ ಕೂಡಲೇ ತಮ್ಮ ಪ್ರವಾಸದ ಮಾಹಿತಿ ಬಹಿರಂಗ ಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಅದಲ್ಲದೇ, ತಾವೇ ಸ್ವಯಂಪ್ರೇರಿತರಾಗಿ ನಗರದ ಇಎಸ್ಐ ಆಸ್ಪತ್ರೆಗೆ ಬಂದು ಕೋವಿಡ್ 19 ಸೋಂಕು ತಪಾಸಣೆಗೆ ಒಳಪಡಬೇಕು. ಈ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಆದೇಶ ಹೊರಡಿಸಿದ್ದಾರೆ.
ಇನ್ನು, ವಿದೇಶದಿಂದ ಬಂದು ಮುಂಬೈ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜಿಲ್ಲೆಯವರು ಇಳಿದಿದ್ದಾರೆ. ಅಲ್ಲಿಂದ ಖಾಸಗಿ ಬಸ್ ಗಳ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ. ಆದ್ದರಿಂದ ಮುಂಬೈ ಹಾಗೂ ಹೈದರಾಬಾದ್ ನಿಂದ ಬಸ್ ಗಳಲ್ಲಿ ಆಗಮಿಸಿದವರ ಮಾಹಿತಿ ನೀಡುವಂತೆ ಖಾಸಗಿ ಬಸ್ ಗಳ ಮಾಲೀಕರು, ಏಜೆಂಟರಿಗೂ ಈಗಾಗಲೇ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.