Advertisement

ಕಲಬುರಗಿಯಲ್ಲಿ ಎಂಟು ಕಡೆ ಕೋವಿಶೀಲ್ಡ್ ಲಸಿಕೆ ವಿತರಣೆ ಆರಂಭ: ಮೊದಲ ಲಸಿಕೆ ಪಡೆದ ಅನಂತರಾಜ್

02:02 PM Jan 16, 2021 | Team Udayavani |

ಕಲಬುರಗಿ: ಕೊರೊನಾ ಮಹಾಮಾರಿಗೆ ದೇಶದಲ್ಲಿ ಮೊದಲ ಬಲಿಯಾದ ಕಲಬುರಗಿ ಜಿಲ್ಲೆಯಲ್ಲಿ ಶನಿವಾರ ಎಂಟು ಕಡೆಗಳಲ್ಲಿ ಕೋವಿಶೀಲ್ಡ್ ಲಸಿಕೆ ವಿತರಣೆಗೆ ಚಾಲನೆ ನೀಡಲಾಯಿತು. ಜಿಮ್ಸ್ ಆಸ್ಪತ್ರೆಯ ಡಿ-ಗ್ರೂಪ್ ನೌಕರ ಅನಂತರಾಜ್ ಜಿಲ್ಲೆಯ ಮೊದಲ ಲಸಿಕೆ ಫಲಾನುಭವಿಯಾಗಿದ್ದಾರೆ.

Advertisement

ನಗರದ ಜಿಮ್ಸ್ ವೈದ್ಯಕೀಯ ಕಾಲೇಜು, ಅಫಜಲಪುರ ತಾಲೂಕಿನ ಗೊಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಂಚೋಳಿ, ಸೇಡಂ, ಜೇವರ್ಗಿ, ಆಳಂದ, ಅಫಜಲಪುರ, ಚಿತ್ತಾಪುರ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಲಸಿಕೆ ವಿತರಣೆ ಆರಂಭಿಸಲಾಗಿದೆ.

ಜಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ‌ ಆಸ್ಪತ್ರೆ ಡಿ-ಗ್ರೂಪ್ ನೌಕರ ಅನಂತರಾಜ್ ಮೊದಲ ಲಸಿಕೆ ಲಸಿಕೆ ಸ್ವೀಕರಿಸಿದರು. ಎರಡನೇ ಲಸಿಕೆ ಫಲಾನುಭವಿಯಾಗಿ ಡಿ-ಗ್ರೂಪ್ ನೌಕರೆ ಅಂಜಲಿ ಬಂಡಗಾರ ಲಸಿಕೆ ಪಡೆದರು.

ಇದನ್ನೂ ಓದಿ :ಭಯಪಡುವ ಅವಶ್ಯಕತೆ ಇಲ್ಲ: ಚಾಮರಾಜನಗರದಲ್ಲಿ ಮೊದಲ ಲಸಿಕೆ ಪಡೆದ ಮಂಜುನಾಥ್ ಅವರ ಅಭಿಪ್ರಾಯ

ಲಸಿಕೆ ನೀಡುವ ಕ್ಷಣಕ್ಕೆ ಸಂಸದ.ಡಾ.ಉಮೇಶ್ ಜಾಧವ್, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಜಿಪಂ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಸಾಕ್ಷಿಯಾದರು.

Advertisement

ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ಜಿಪಂ ಸಿಇಓ ಡಾ.ಪಿ.ರಾಜಾ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್, ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಶೇಖರ್ ಮಾಲಿ, ಜಿಲ್ಲಾ ಸರ್ಜನ್ ಡಾ.ಎ.ಎಸ್.‌ರುದ್ರವಾಡಿ ಸೇರಿ ಹಲವರು ಉಪಸ್ಥಿತರಿದ್ದಾರೆ.

ಇದಕ್ಕೂ ಮುನ್ನ ಲಸಿಕೆ ಕೇಂದ್ರ ಹಾಗೂ ನೋಂದಣಿ ಕೊಠಡಿಯನ್ನು ಅಧಿಕಾರಿಗಳು ವೀಕ್ಷಿಸಿ ಸಿದ್ಧತೆ ಪರಿಶೀಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರಪ್ರಸಾರ ವೀಕ್ಷಿಸಿದರು. ನಂತರ ಲಸಿಕೆ ವಿತರಣೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸದ ಡಾ. ಉಮೇಶ ಜಾಧವ್ ಮಾತನಾಡಿ,
ಕೊರೊನಾ ಲಸಿಕೆ ಬಗ್ಗೆ ದೇಶದ ಜನರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಇವತ್ತು ಆ ದಿನ ಬಂದಿದ್ದು, ಲಸಿಕೆ ವಿತರಣೆ ಅಭಿಯಾನ ಯಶಸ್ವಿಯಾಗುತ್ತದೆ. ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತದೆ. ನಂತರ ಪ್ರತಿಯೊಬ್ಬರಿಗೂ ಲಸಿಕೆ ದೊರೆಯಲಿದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಕೆಲವೊಮ್ಮೆ ಯಾವುದೇ ಸಣ್ಣಪುಟ್ಟ ಸಮಸ್ಯೆ ಉಂಟಾದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಜಿಲ್ಲೆಗೆ ಈಗ 12 ಸಾವಿರ ಡೋಸ್ ಲಸಿಕೆ ಪೂರೈಕೆಯಾಗಿದೆ. ಉಳಿಕೆ ಡೋಸ್ ಲಸಿಕೆಯನ್ನು ಶೀಘ್ರದಲ್ಲೇ ಸರ್ಕಾರ ಪೂರೈಸಲಿದೆ ಎಂದು ಸಂಸದರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next