ಬೆಂಗಳೂರು: ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿ ಯಲು ಜೆಡಿಎಸ್ ಬೆಂಬಲ ಕೋರುವ ನಿಟ್ಟಿನಲ್ಲಿ ಪೈಪೋಟಿ ಮುಂದುವರಿದಿದ್ದು, ಸಚಿವ ಆರ್. ಅಶೋಕ್ ಶನಿವಾರ ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಯವರನ್ನು ಭೇಟಿ ಮಾಡಿ ಚರ್ಚಿಸಿದರು.
ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕಲಬುರಗಿ ಅಷ್ಟೇ ಅಲ್ಲದೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿರುವ ದೊಡ್ಡಬಳ್ಳಾಪುರ ಸಹಿತ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಸಂಬಂಧ ಮಾತುಕತೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಜತೆಗೆ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿದ್ದು, ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಬೆಂಬಲ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಶೋಕ್ ಭೇಟಿ ಕುರಿತು ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, ಹಲವು ವಿಚಾರಗಳು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಲಾಗಿದೆ ಎಂದಿದ್ದಾರೆ.
ಇದರ ನಡುವೆಯೇ ಸೋಮವಾರ ಸಂಜೆ ಖಾಸಗಿ ಹೊಟೇಲ್‌ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಅಲ್ಲಿ ಕಲಬುರಗಿ ಪಾಲಿಕೆಯಲ್ಲಿ ಬೆಂಬಲ ಹಾಗೂ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಚರ್ಚೆಯಾಗಿ ತೀರ್ಮಾನಿಸುವ ಸಾಧ್ಯತೆಯಿದೆ.