ಕಲಬುರಗಿ: ಅತಿವೃಷ್ಟಿ ಹಾನಿಗೆ ಸೂಕ್ತ ಪರಿಹಾರ ನೀಡದಿರುವುದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅನುದಾನ ಕಡಿತ ಮಾಡಿರುವುದು, ಪ್ರಮುಖವಾಗಿ ಈ ಭಾಗದ ವಾಣಿಜ್ಯ ಬೆಳೆ ತೊಗರಿ ಖರೀದಿಗೆ ಪ್ರೋತ್ಸಾಹ ಧನ ನಿಗದಿ ಮಾಡದಿರುವುದು ಸೇರಿದಂತೆ ಇತರ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ತೊಗರಿಯನ್ನು ಕೇಂದ್ರದ ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನದೊಂದಿಗೆ ಖರೀದಿ ಮಾಡಲಾಗುತ್ತಾ ಬರಲಾಗಿದೆ. ಆದರೆ ಪ್ರಸಕ್ತವಾಗಿ ನಯಾಪೈಸೆ ಪ್ರೋತ್ಸಾಹ ನಿಗದಿ ಮಾಡದೇ ಖರೀದಿಗೆ ಮುಂದಾಗಿದ್ದು, ಅತಿವೃಷ್ಟಿ ಯಿಂದ ಶೇ. 50ರಷ್ಟು ಬೆಳೆಹಾನಿಯಾಗಿರುವಾಗ ಪ್ರೋತ್ಸಾಹ ಧನ ಕೊಡದಿರುವುದು ರೈತರಿಗೆ ಪಾತಾಳಕ್ಕೆ ತಳ್ಳುವುದಾಗಿದೆ. ಹೀಗಾಗಿ ಈ ಕೂಡಲೇ ಪ್ರೋತ್ಸಾಹ ಧನ ನಿಗದಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5. 92 ಲಕ್ಷ ಹೆಕ್ಟೇರ್ ನಲ್ಲಿ ತೊಗರಿ ಬಿತ್ತನೆಯಾದರೆ ಇದರಲ್ಲಿ ಅತಿವೃಷ್ಟಿಯಿಂದ ಮೂರು ಲಕ್ಷ ಹೆಕ್ಟೇರ್ ನಷ್ಟವಾಗಿದೆ. ಪ್ರತಿವರ್ಷ ಸರಾಸರಿ 40 ರಿಂದ 45 ಲಕ್ಷ ಕ್ವಿಂಟಾಲ್ ಇಳುವರಿ ಬರುವಲ್ಲಿ ಈ ಬಾರಿ 15 ರಿಂದ 20 ಲಕ್ಷ ಕ್ವಿಂಟಾಲ್ ಮಾತ್ರ ಇಳುವರಿ ಬರುತ್ತಿದೆ. ಆದ್ದರಿಂದ ರಾಜ್ಯ ಸರಕಾರ ಕೇಂದ್ರದ 6000 ರು ಬೆಂಬಲ ಜತೆಗೆ ರಾಜ್ಯದಿಂದ 1500 ರೂ ಪ್ರೋತ್ಸಾಹ ಧನ ನಿಗದಿಮಾಡಿ 7500 ರೂ ಪ್ರತಿ ಕ್ವಿಂಟಾಲ್ ನಂತೆ ಖರೀದಿ ಮಾಡಬೇಕು. ಒಂದು ವೇಳೆ ವಿಳಂಬ ಧೋರಣೆ ತಳೆದರೆ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಂದರು.
ರೈತರ ಸರಕಾರವೆಂದು ಬರೀ ಬಾಯಲ್ಲಿ ಹೇಳಿದರೆ ಹಾಗೂ ಹೆಗಲ ಮೇಲೆ ಹಸಿರು ಹೊದಿಸಿಕೊಂಡರೆ ಸಾಲದು. ಅದಕ್ಕೆ ತಕ್ಕಂತೆ ನಡೆಯಬೇಕು. ಕೇಂದ್ರ ಸರಕಾರವೂ ರೈತರ ಕಡೆ ನೋಡದೇ ಹಿಟ್ಲರ್ ನಂತೆ ನಡೆದುಕೊಳ್ಳುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ ಉಂಟಾಗಿ ಎರಡು ತಿಂಗಳು ಮೇಲಾಗಿದೆ. ಈಗ ಕೇಂದ್ರ ಅಧ್ಯಯನ ತಂಡ ಆಗಮಿಸಿದೆ. ರಾಜ್ಯ ಸರ್ಕಾರ ಕೇಳಿದ ಪರಿಹಾರ ನೀಡದೇ ಕೇಂದ್ರ ತಾರತಮ್ಯ ವಹಿಸಿದೆ. ಒಟ್ಟಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸಮನ್ವಯತೆ ಇಲ್ಲ ಎನ್ನುವಂತಾಗಿದೆ. ರಾಜ್ಯದಿಂದ 25 ಸಂಸದರಿದ್ದರೂ ಉಪಯೋಗ ಬಾರದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊನ್ನೆ ನಡೆದ ಅಧಿವೇಶನದಲ್ಲಿ ತೊಗರಿ ಖರೀದಿ ಹಾಗೂ ಬೆಂಬಲ ಬೆಲೆ ಬಗ್ಗೆ ಕೇಳಿದರೆ ಮುಖ್ಯ ಮಂತ್ರಿಗಳು ಉತ್ತರವೇ ನೀಡಲಿಲ್ಲ. ಕಳೆದ ವರ್ಷ ಕಲ್ಯಾಣ ಕರ್ನಾಟಕ ವೆಂದು ಘೋಷಣೆ ಮಾಡಿದ್ದನ್ನು ಬಿಟ್ಟರೆ ಬಿಜೆಪಿ ಸರ್ಕಾರ ಈ ಭಾಗಕ್ಕೆ ಏನು ಮಾಡ್ತಾ ಇಲ್ಲ. ಕೆಕೆಆರ್ ಡಿಬಿ ಗೆ ನಿಗದಿ ಇರುವ 1500 ಕೋ. ರೂ ಕಡಿತ ಮಾಡಿದೆ. ಇಂತಹುದರಲ್ಲಿ ಮಂಡಳಿ ಅಧ್ಯಕ್ಷರು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಗ್ರಾ.ಪಂಗೆ ಒಂದು ಕೋ.ರೂ ಕೊಡುವುದಾಗಿ ಹೇಳಿದ್ದಾರೆ. ಮಂಡಳಿಗೆ ಹಣವೇ ಬಿಡುಗಡೆಯಾಗಿಲ್ಲ. ಗ್ರಾಮಗಳ ಅಭಿವೃದ್ಧಿ ಎಂಬುದೇ ಗೊತ್ತಿಲ್ಲದ ಬಿಜೆಪಿ ಸರ್ಕಾರ ಗ್ರಾಮ ಸ್ವರಾಜ್ ಜಪಿಸುತ್ತಿದೆ. ಗ್ರಾಮ ಸ್ವರಾಜ್ ಕ್ಕೆ ಅಡಿಪಾಯ ಹಾಕಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಎಂದರು.
ಇದನ್ನೂ ಓದಿ:ಪರಿಷತ್ ಪೀಠಕ್ಕಾಗಿ ತಳ್ಳಾಟ, ಗದ್ಗದಿತರಾದ ಹೊರಟ್ಟಿ:’ಚಿಂತಕರ ಚಾವಡಿ’ಯಲ್ಲಿ ನಡೆದಿದ್ದಿಷ್ಟು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಅಧಿಕಾರಿಗಳ ಸಂಬಂಧಿಕರು ಚುನಾವಣೆಗೆ ನಿಂತರೆ ಅಧಿಕಾರಿಗಳ ಮೂಲಕ ಒತ್ತಡ ಹಾಕಿ ನಾಮಪತ್ರ ವಾಪಸ್ಸು ಮಾಡಿಸಲಾಗುತ್ತಿದೆ. ಪೊಲೀಸರಂತು ಬಿಜೆಪಿ ಶಾಸಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ದುರ್ಬಳಿಕೆ ಬಿಜೆಪಿಯವರಿಂದ ಕಲಿಯಬೇಕೆಂದರು.
ಹಿಂಬಾಗಿನಿಂದ ಬಂದು ಸರ್ಕಾರ ರಚಿಸಿದ್ದರಿಂದ ಎಲ್ಲ ಕೆಲಸ ಕಾರ್ಯಗಳು ಹಿಂದಿನ ಬಾಗಿಲಿನಿಂದಲೇ ನಡೆದಿವೆ ಎಂದು ಡಾ.ಅಜಯಸಿಂಗ್, ಡಾ. ಶರಣಪ್ರಕಾಶ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಾದ ಎಂ.ವೈ. ಪಾಟೀಲ್, ಖನೀಜ್ ಫಾತೀಮಾ, ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ನೀಲಕಂಠ ರಾವ ಮೂಲಗೆ, ಶರಣಕುಮಾರ ಮೋದಿ, ಸುಭಾಷ್ ರಾಠೋಡ, ವಿಜಯಕುಮಾರ ರಾಮಕೃಷ್ಣ, ಶರಣು ಭೂಸನೂರ, ಈರಣ್ಣ ಝಳಕಿ ಸೇರಿದಂತೆ ಮುಂತಾದವರಿದ್ದರು.