ಕಲಬುರಗಿ: ಕಳೆದ ಒಂಬತ್ತು ತಿಂಗಳಲ್ಲಿ ರಾಜ್ಯ ಸರ್ಕಾರ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಯಾವ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದೆಯೋ ಅದರ ಸಂಪೂರ್ಣ ಮಾಹಿತಿಯನ್ನು ಕಲ್ಯಾಣ ಕರ್ನಾಟಕ ರಥದಲ್ಲಿ ಮುದ್ರಿಸಿ, ಬಿಜೆಪಿ ಕಚೇರಿಗೆ ಕಳಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೇವಲ ಮನವಿ ಪತ್ರದಲ್ಲಿ ಮುದುರಿಸಿಕೊಡಲು ಆಗುವುದಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರ ಮಾಹಿತಿ ಇರುವ ರಥವನ್ನೇ ಬಿಜೆಪಿ ಕಚೇರಿಗೆ ಸೋಮವಾರ ಕಳಿಸಿಕೊಡಲಾಗುವುದು. ಅದನ್ನು ಕಣ್ಣು ತೆರೆದು ಬಿಜೆಪಿ ನಾಯಕರು ಓದಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾನವರಿಕೆ ಮಾಡಿಕೊಳ್ಳಬೇಕು ಎಂದರು.
ಕಲ್ಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಬಿಜೆಪಿಯವರಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ನಮ್ಮ ವಿರುದ್ಧ ಆರೋಪ ಮಾಡಿ ತಮ್ಮ ಹೊಟ್ಟೆ ಬೇನಿ ಮುಚ್ಚಿಕೊಳ್ಳುವ ಅವರ ನಾಯಕರನ್ನು ಖುಷಿ ಮಾಡುವ ಸಲುವಾಗಿ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಕಾಲು ಕೆದುರಿಕೊಂಡು ವಿನಾಃ ಕಾರಣ ಹೇಳಿಕೆಗಳನ್ನು, ಮನೆ ಮನೆಗಳಿಗೆ ಮನವಿ ಪತ್ರಗಳನ್ನು ಹಂಚಿ ಜನರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ. ಆದರೆ ಇಂಥ ಯಾವುದೇ ಗೊಂದಲಗಳಿಗೆ, ಆರೋಪಗಳಿಗೆ ಜನರು ಕಿವಿ ಕೊಡುವುದಿಲ್ಲ. ಜನರಿಗೆ ರಾಜ್ಯ ಸರ್ಕಾರ ಮಾಡಿರುವ ಕೆಲಸ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಇವೆಲ್ಲವೂ ಕಣ್ಣೆದುರಿಗೆ ಕಾಣಿಸುತ್ತಿರುವಾಗ ಬಿಜೆಪಿಯ ಹಸಿ ಸುಳ್ಳು ನಂಬಲಾರರು ಎಂದರು.
ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಆರೋಪ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ತಂದೆ, ತಾಯಿ, ಮಕ್ಕಳು ಸೇರಿಕೊಂಡು ಕುಟುಂಬ ರಾಜಕಾರಣ ಮಾಡಿರುವ ಕಾರಣದಿಂದಾಗಿಯೇ ಜನ ಇವತ್ತು ಅವರನ್ನು ತಿರಸ್ಕರಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಕೇವಲ ಸಾಲು ಸಾಲು ಭ್ರಷ್ಟಾಚಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಮಾಡಲ್ಪಟ್ಟಿದೆ ಕಲ್ಬುರ್ಗಿ ನಗರದಲ್ಲಂತೂ ಕುಡಿಯುವ ನೀರಿನಿಂದ ಹಿಡಿದು ಓಡಾಡುವ ರಸ್ತೆಗಳು ಕೂಡ ಇವರಿಂದ ಮಾಡಲು ಸಾಧ್ಯವಾಗಿಲ್ಲ ಇದರ ಮಧ್ಯದಲ್ಲೂ ಹಲವು ಕಾರ್ಯಗಳು ನಡೆದಿದ್ದರೂ ಅದರಲ್ಲಿ ಸಾಕಷ್ಟು ಲೂಟಿಯೇ ಆಗಿದೆ ಎಂದು ನೇರವಾಗಿ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿದ್ದ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕೂರು ಮಾತನಾಡಿ, ಕಳೆದ ಐದು ವರ್ಷದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಿಜೆಪಿ ನಾಯಕರು ಕಲಬುರ್ಗಿಗೆ ಬಂದಾಗ ಪಂಖಾನು ಪುಂಖವಾಗಿ ಬರೀ ಸುಳ್ಳುಗಳನ್ನೇ ಹೇಳಿಕೊಂಡು ಓಡಾಡಿರುವುದು ಜನರಿಗೆ ಈಗ ಮನವರಿಕೆಯಾಗಿದೆ. ನಮ್ಮ ಕೋಲಿ ಸಮಾಜಕ್ಕೂ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೊಡ್ಡ ಸುಳ್ಳನ್ನ ಹೇಳಿ ಹೋಗಿದ್ದು , ಈಗ ಸಮಾಜದ ಜನರು ಪರಿತಪಿಸುವಂತಾಗುತ್ತಿದೆ ಎಂದರು.
ನಿನ್ನೆ ಬಿಜೆಪಿ ಮುಖಂಡರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದು ಒಂಬತ್ತು ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಹಲವು ಮುಖಂಡರ ಮನೆಗೆ ಮನವಿ ಪತ್ರಗಳನ್ನ ಹಂಚಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಪ್ರತಿ ದಾಳಿ ಮಾಡಿದೆ. ಇದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಬೀದಿ ಜಗಳ ನಡೆದಿದ್ದು ಅಭಿವೃದ್ಧಿ ವಿಚಾರದಲ್ಲಿ ಜನರ ಮುಂದೆ ಸತ್ಯ ಬಯಲಾಗುತ್ತಿದೆ.