Advertisement

ಬಿಇಒ ಕಚೇರಿಗೆ ದಾರಿ ಯಾವುದಯ್ಯ?

10:03 AM Aug 29, 2019 | Team Udayavani |

ವಿಶೇಷ ವರದಿ
ಕಲಬುರಗಿ:
ಮಹಾನಗರಕ್ಕೆ ಪೊಲೀಸ್‌ ಆಯುಕ್ತಾಲಯ ( ಪೊಲೀಸ್‌ ಕಮಿಷನರ್‌) ಬಂದರೂ ಸುಧಾರಣೆಯಾಗದ ಸಂಚಾರಿ ವ್ಯವಸ್ಥೆಗೆ ಕನ್ನಡಿ ಎನ್ನುವಂತಿದೆ ನಗರದ ಹೃದಯ ಭಾಗ ಸೂಪರ್‌ ಮಾರ್ಕೆಟ್ದಲ್ಲಿರುವ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರವೇಶ ದ್ವಾರದ ಭಾಗ.

Advertisement

ಬಿಇಒ ಕಚೇರಿ ಎದರುಗಡೆ ಪ್ರವೇಶ ದ್ವಾರ ಹಾಗೂ ಗೋಡೆಗೆ ಹತ್ತಿಕೊಂಡಂತೆ ಸಾಲು-ಸಾಲಾಗಿ ಬಂಡಿಗಳು ನಿಂತಿರುತ್ತವೆ. ಅಲ್ಲದೇ ಕಾಯಿಪಲ್ಯೆ ಮಾರಾಟ ನಡೆಯುತ್ತದೆ. ಅಷ್ಟೇ ಏಕೆ ಕಚೇರಿ ಎದರೇ ರಸ್ತೆ ಇದ್ದರೂ ಇಲ್ಲದಂತೆ ವಾತಾವರಣ ನಿರ್ಮಾಣವಾಗಿದೆ. ಇದನ್ನು ನೋಡಿದರೆ ಸಂಚಾರಿ ವ್ಯವಸ್ಥೆ ಇದೆಯೇ? ಎನ್ನುವಂತಾಗಿದೆ.

ಕಲಬುರಗಿ ಉತ್ತರ ಬಿಇಒ ಕಚೇರಿ, ಕಚೇರಿ ಹಿಂದೆ ಹಿಂದೆ ಆರು ದಶಕಗಳಿಗಿಂತಲೂ ಹಳೆಯದಾದ ಆಸೀಫ್ ಗಂಜ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಬಿಇಒ ಕಚೇರಿಗೂ ದಿನನಿತ್ಯ ನೂರಾರು ಜನರು ತಮ್ಮ ಕೆಲಸ-ಕಾರ್ಯಗಳಿಗೆ ಬರುತ್ತಾರೆ. ಜತೆಗೆ ಸಾರ್ವಜನಿಕರೂ ಈ ಜಾಗೆಯಲ್ಲಿ ಓಡಾಡುತ್ತಾರೆ. ಬಿಇಒ ಕಚೇರಿಗೆ ಬರಬೇಕೆಂದರೆ ಎಲ್ಲೋ ಗಾಡಿ ನಿಲ್ಲಿಸಿ ಬರಬೇಕು. ಕಚೇರಿಯೊಳಗೆ ದ್ವಿಚಕ್ರ ವಾಹನ ನಿಲ್ಲಿಸಲು ಸ್ಥಳಾವಕಾಶವಿದ್ದರೂ ತರುವಂತಿಲ್ಲ.

ಬೀದಿ ವ್ಯಾಪಾರಿಗಳ ಕಾಟದಿಂದಾಗಿ ಪ್ರವೇಶ ದ್ವಾರಕ್ಕೆ ಗೇಟು ಅಳವಡಿಸಲಾಗಿದೆ. ಇಲ್ಲದಿದ್ದರೆ ಅರ್ಧ ಸರಂಜಾಮುಗಳನ್ನು ಕಚೇರಿ ಆವರಣದೊಳಗೆ ತಂದಿಡುವುದಲ್ಲದೇ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಗೇಟು ಹಾಕಲಾಗುತ್ತಿದೆ. ಈ ಗೇಟಿನ ಮೂಲಕವಾದರೂ ಒಳಗೆ ಹೋಗಬೇಕೆಂದರೆ ಗೇಟಿನ ಎದರೇ ಒಂದಿಂಚು ಜಾಗ ಬಿಡದಂತೆ ವ್ಯಾಪರಿಗಳು ತಮ್ಮ ವಹಿವಾಟು ನಡೆಸುತ್ತಿದ್ದಾರೆ. ಕೇಳಿದರೆ ಎಲ್ಲ ವ್ಯಾಪಾರಿಗಳು ಜಗಳಕ್ಕೆ ಬರುತ್ತಾರೆ.

ಒಮ್ಮೊಮ್ಮೆ ಪ್ರಶ್ನಿಸಿದ್ದಕ್ಕೆ ಶಿಕ್ಷಕರು ಹಾಗೂ ಸಾರ್ವಜನಿಕರ ಮೇಲೆ ಹಲ್ಲೆಗಳೂ ನಡೆದಿವೆ. ಶಿಕ್ಷಣಾಧಿಕಾರಿಗಳು ಕೇಳಿದರೆಂದರೆ ಕಚೇರಿಯೊಳಗೆ ಹಿಂದಿನಿಂದ ಕಸದ ರಾಶಿಯನ್ನೇ ಹಾಕುತ್ತಾರೆ. ಎರಡು ಸಲ ಕಚೇರಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿದೆ.

Advertisement

ಆಸೀಫ್‌ ಗಂಜ್‌ ಸರ್ಕಾರಿ ಶಾಲೆ ಮುಖ್ಯಶಿಕ್ಷಕರು ಗೇಟಿನ ಎದುರಲ್ಲೇ ನಿಂತು ಒಬ್ಬೊಬ್ಬರನ್ನೇ ಒಳಗಡೆ ಬಿಡುತ್ತಿರುತ್ತಾರೆ. ಇಲ್ಲದಿದ್ದರೆ ಮಕ್ಕಳು ಒಳಗೆ ಪ್ರವೇಶಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಕಚೇರಿ ಆವರಣದೊಳಗೆ ಉರ್ದು-ಮರಾಠಿ ಶಾಲೆಯೂ ಇದೆ. ಶಿಕ್ಷಕರ ಸಂಘದ ಕಚೇರಿಯೂ ಇದೆ.

ಅತಿಕ್ರಮಣಕಾರರ ಹಾವಳಿ: ಅತಿ ಪುರಾತನವಾದ ಈ ಆಸೀಫ್ ಗಂಜ್‌ನ ಶಾಲೆ ಮಹಾನಗರದ ಹೃದಯ ಭಾಗದಲ್ಲಿರುವುದು ಹಲವು ಭೂ ಅತಿಕ್ರಮಣಕಾರರ ಒಂದು ಕಣ್ಣಿದೆ. ಈಗಾಗಲೇ ಹಿಂದುಗಡೆ ಸ್ವಲ್ಪ ಅತಿಕ್ರಮಣವಾಗಿದೆ. ಇರುವ ಶಾಲೆಯೊಂದು ಮಕ್ಕಳ ಕೊರತೆಯಿಂದ ಮುಚ್ಚಿದರೆ ಬಿಇಒ ಕಚೇರಿಯೊಂದು ಯಾವಾಗ ಬೇಕಾದರೂ ಸ್ಥಳಾಂತರ ಮಾಡಿದರೆ ಜಾಗವೂ ತಮ್ಮದಾಗಬಹುದೆಂದು ತಿಳಿದು ಕೆಲವರು ಇಲ್ಲ-ಸಲ್ಲದ ದಂಧೆಗಳನ್ನು ನಿರೂಪಿಸಲಾಗುತ್ತಿದೆ.

ಇದೇ ಬಿಇಒ ಕಚೇರಿ ಎದರುಗಡೆ ಕಸ್ತೂರಬಾ ಬಾಲಿಕಾ ವಿದ್ಯಾಲಯ ಹಾಗೂ ಪ್ರೌಢ ಶಾಲೆಯಿದೆ. ಇಲ್ಲಿಯೂ ಅದೇ ಸ್ಥಿತಿಯಿದೆ. ಇದರ ಜತೆಗೆ ಕಳ್ಳಕಾಕರ ಹಾವಳಿಯೂ ಇದೆ. ಇದಕ್ಕೆ ಕಡಿವಾಣ ಇಲ್ಲವೇ? ಎಂದು ಸಾರ್ವಜನಿಕರು ಅಸಹಾಯಕತೆಯಿಂದ ಕೇಳುತ್ತಿದ್ದಾರೆ.

ಕ್ರಮ ಅವಶ್ಯ: ಆಸೀಫ್ ಗಂಜ್‌ನ ಶಾಲೆ ಕಾಂಪೌಂಡ್‌ ಹೆಚ್ಚಿಸಿ ಸೌಲಭ್ಯ ಕಲ್ಪಿಸಿದವರು ದಶಕದ ಹಿಂದೆ ಶಿಕ್ಷಣ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಅವರು. ಸಚಿವರಿದ್ದ ಸಂದರ್ಭದಲ್ಲಿ ಶಾಲೆ ಬೀದಿ ವ್ಯಾಪಾರಿಗಳ ಕಾಟದಿಂದ ಕೈ ತಪ್ಪಲಿದೆ ಎಂಬುದನ್ನರಿತು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದ್ದರಿಂದ ಶಾಲೆ ಹಾಗೂ ಕಚೇರಿ ಉಳಿಯುವಂತೆ ಆಗಿದೆ. ಈಗ ಮತ್ತೇ ಕ್ರಮದ ಅವಶ್ಯಕತೆವಿದೆ.

ಬೀದಿ ವ್ಯಾಪಾರಿಗಳ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರು ತಮ್ಮ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು.
ಡಿ.ಕಿಶೋರ ಬಾಬು,
 ಉಪ ಪೊಲೀಸ್‌ ಆಯುಕ್ತರು

ಕಚೇರಿಯೊಳಗೆ ಬರಲು ಅನುಭವಿಸುತ್ತಿರುವ ಕಷ್ಟ ಹಾಗೂ ನಡೆಯುವ ಕೆಲವು ತೊಂದರೆಗಳ ಕುರಿತಾಗಿ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಹಲವು ಸಲ ತರಲಾಗಿದೆ. ಪೊಲೀಸ್‌ರು ಪಾಲಿಕೆ ಮೇಲೆ ಹಾಗೂ ಪಾಲಿಕೆಯವರು ಪೊಲೀಸರ ಮೇಲೆ ಹಾಕುತ್ತಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಚೆನ್ನಬಸಪ್ಪ ಮುಧೋಳ,
 ಬಿಇಒ, ಕಲಬುರಗಿ ಉತ್ತರ

ಪೊಲೀಸರ ಹಾಗೂ ಪಾಲಿಕೆಯವರ ಪರೋಕ್ಷ ಸಹಾಯದಿಂದಲೇ ಬೀದಿ ವ್ಯಾಪಾರಿಗಳ ದೌರ್ಜನ್ಯ ಹೆಚ್ಚಳವಾಗಿದೆ. ನಡು ರಸ್ತೆ ಮೇಲೆಯೇ ರಾಜಾರೋಷವಾಗಿ ಬಂಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡಲಾಗುತ್ತಿದೆ. ಹೀಗಾಗಿ ದ್ವಿಚಕ್ರವಾಹನ ಮೇಲೆ ತಿರುಗಾಡದಂತಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿದಲ್ಲಿ ಸುಧಾರಣೆ ಹೇಗೆ ಸಾಧ್ಯ?
ಮಲ್ಲಿಕಾರ್ಜುನ ಎಚ್.,
 ನಗರ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next