ಕಲಬುರಗಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಎಲ್ಲ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಸಮಾನ ವೇತನವನ್ನು ಸಾರಿಗೆ ನೌಕರರಿಗೂ ಜಾರಿ ಮಾಡಲು ಸರ್ಕಾರಕ್ಕೆ 2020ರ ಜನವರಿ 1ರ ವರೆಗೆ ಗಡುವು ನೀಡಲು ಸಾರಿಗೆ ನೌಕರರು ಒಕ್ಕೊರಲಿನ ನಿರ್ಣಯಕ್ಕೆ ಬಂದರು.
ನಗರದ ಕೊಠಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಅಖೀಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಈಶಾನ್ಯ ವಲಯ ನೌಕರರ ಮಹಾಮಂಡಲ, ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಯಶ್ರದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಅಖೀಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲ ರಾಜ್ಯಾಧ್ಯಕ್ಷ ಡಾ| ಕೆ.ಎಸ್. ಶರ್ಮಾ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗದ ಏಳು ಜಿಲ್ಲೆಗಳ ಒಂಭತ್ತು ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ವರ್ಷದ ಅಂತ್ಯಕ್ಕೆ ಸರ್ಕಾರಿ ನೌಕರರು ಎಂದು ಪರಿಗಣಿಸಿ ಜನವರಿ 1ರಿಂದಲೇ ಜಾರಿಗೊಳ್ಳಬೇಕು ಎಂದು ನೌಕರರು ಆಗ್ರಹಿಸಿದರು.
ಸರ್ಕಾರಿ ನೌಕರರೆಂದು ಪರಿಗಣಿಸಲು ಸಾರಿಗೆ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜನವರಿ 1ರಿಂದಲೇ ಸಾರಿಗೆ ಸಿಬ್ಬಂದಿಗೂ ಆರನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಈ ಕುರಿತು ಎಲ್ಲ ವಿಭಾಗಗಳಲ್ಲಿ ಸಮಾವೇಶ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರಿಗೆ ಹೋಲಿಸಿದರೆ ಸಾರಿಗೆ ನೌಕರರು ಪಡೆದುಕೊಳ್ಳುವ ವೇತನ ಕಡಿಮೆಯಿದೆ. ಆದ್ದರಿಂದ ವೇತನ ಆಯೋಗ ಶಿಫಾರಸಿನಂತೆ ವೇತನ ನೀಡುವ ವೇಳೆಯಲ್ಲಿ ಸಾರಿಗೆ ಸಂಸ್ಥೆಯಲ್ಲಿರುವ ಚಾಲಕ ಕಂ ನಿರ್ವಾಹಕ, ತಾಂತ್ರಿಕ ಸಹಾಯಕರು, ಜಾರ್ಜ್‌ಮೆನ್ ಹಾಗೂ ಮತ್ತಿತರ ಎಲ್ಲ ಹುದ್ದೆಗಳಿಗೆ ಸಮಾನ ವೇತನ ನೀಡಲು ವೇತನ ಮಂಡಳಿಯಲ್ಲಿ ಹೊಸ ಶ್ರೇಣಿ ರೂಪಿಸಬೇಕಾಗುತ್ತದೆ. ಈ ಕುರಿತು ಸಮಸ್ಯೆಯಾಗದಂತೆ ಸರ್ಕಾರ ಮುಂಜಾಗ್ರತೆ ವಹಿಸಬೇಕು. ಜತೆಗೆ ಸಾರಿಗೆ ನೌಕರರಿಗೆ ಅನ್ವಯಿಸುವಂತ 12 ಕಾಯ್ದೆಗಳನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.
ಸಾರಿಗೆ ಸಂಸ್ಥೆಯಲ್ಲಿರುವ ಕೆಲವರು ಆಯೋಗದ ಶಿಫಾರಸಿಗಿಂತ ಹೆಚ್ಚಿನ ವೇತನ ಪಡೆದುಕೊಳ್ಳುತ್ತಿದ್ದರೆ, ಅಂತಹವರಿಗೆ ವೇತನ ಸಂರಕ್ಷಣೆ ಭದ್ರತೆ ನೀಡಬೇಕು. ಈ ಹಿಂದೆ ಮಹಾಮಂಡಳ ಮತ್ತು ಸರ್ಕಾರ ನಡುವೆ ಕೈಗಾರಿಕಾ ಒಪ್ಪಂದ ಜಾರಿಗೊಳಿಸಬೇಕು. ನೌಕರರಿಗೆ ವಿಶೇಷ ಭತ್ಯೆ, ಮಿತಿಯಿಲ್ಲದ ಗ್ರ್ಯಾಚುಟಿ ಇತ್ಯಾದಿಗಳಿಗೂ ರಕ್ಷಣೆ ನೀಡಬೇಕು. ನೌಕರರ ಮರಣ ಇಲ್ಲವೇ ನಿವೃತ್ತಿ ಸೌಕರ್ಯ ನೀಡಬೇಕು. ನೌಕರರಿಗಾಗಿ ಭವಿಷ್ಯ ನಿಧಿ ನ್ಯಾಯ ಮಂಡಳಿಯಲ್ಲಿ ನೂರಾರು ಕೋಟಿ ರೂ. ಇದೆ. ಈ ಸೌಲಭ್ಯ ಮುಂದುವರಿಸಬೇಕೆಂದು ಆಗ್ರಹಿಸಿದರು.
ವಿಚಾರ ಸಂಕಿರಣದಲ್ಲಿ ವಯೋನಿವೃತ್ತಿ ಹೊಂದಿದ ಬಸವರಾಜ ಕಣ್ಣಿ ಮತ್ತು ನೌಕರರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಚಂದ್ರಕಾಂತ ಡೊಳ್ಳೆ ಅವರನ್ನು ಸನ್ಮಾನಿಸಲಾಯಿತು. ಅಖೀಲ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮಹಾಮಂಡಳದ ಮಹಾಪ್ರಧಾನ ಕಾರ್ಯದರ್ಶಿ ಬಿ. ಜಯದೇವರಾಜ ಅರಸ್,
ಖಜಾಂಚಿ ಎನ್.ಆರ್. ದೇವರಾಜೆ ಅರಸ್, ಈಶಾನ್ಯ ವಲಯದ ಅಧ್ಯಕ್ಷ ಚಂದ್ರಕಾಂತ ಗದ್ದಗಿ, ಮುಖಂಡರಾದ ಭೀಮರಾವ್ ಯರಿಗೋಳ, ಎಸ್.ಎಸ್.ಸಜ್ಜನ, ಸಂಗಮನಾಥ ರಬಶೆಟ್ಟಿ, ಇಸ್ಮಾಯಿಲ್ ಪಟೇಲ, ವಿವೇಕಾನಂದ ಪಾಟೀಲ, ವೀರಭದ್ರಪ್ಪ ಹಾಗೂ ಈಶಾನ್ಯ ವಿಭಾಗದ ಏಳು ಜಿಲ್ಲೆಗಳ ಒಂಭತ್ತು ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಕೋಠಾರಿ ಕಲ್ಯಾಣ ಮಂಟಪದವರೆಗೆ ಸಾರಿಗೆ ನೌಕರರು ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದರು.