ಕಲಬುರಗಿ: ಅಫಜಲಪುರ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ನೀರಿನ ಸಮಸ್ಯೆ ತಲೆದೋರಿದ್ದು, ಕೂಡಲೇ ಮಹಾರಾಷ್ಟದ ಉಜನಿಯಿಂದ ಭೀಮಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಲು ಶೀಘ್ರದಲ್ಲಿ ಜಿಲ್ಲೆಯ ಏಳು ಜನ ಕಾಂಗ್ರೆಸ್ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಬಳಿ ನಿಯೋಗ ತೆರಳಿ ಒತ್ತಡ ಹೇರಲಾಗುವುದು ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ನಗರದ ಪ್ರತಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಚಾವತ್ ಆಯೋಗದ ತೀರ್ಪಿನಂತೆ ಹಕ್ಕಿನ ನೀರು ಬಿಡಲು ಮಳೆಗಾಲವೂ ಸೇರಿದಂತೆ ಎಲ್ಲ ಕಾಲದಲ್ಲೂ ಮಹಾರಾಷ್ಟ್ರ ನೀರು ಬಿಡುವುದಿಲ್ಲ. ಈ ವರ್ಷ ಮಳೆಯಾಗಿಲ್ಲ. ಇದರಿಂದ ನಮ್ಮ ನದಿ ದಡ ಮತ್ತು ನದಿಯ ನೀರನ್ನೇ ಅವಲಂಬಿಸಿರುವ ಅಫಜಲಪುರ, ಕಲಬುರಗಿಗೆ ಕುಡಿಯುವ ನೀರಿಗೂ ಅಪಾಯ ಎದುರಾಗಲಿದೆ. ಆದ್ದರಿಂದ ಕೂಡಲೇ ಮಹಾರಾಷ್ಟ್ರ ಉಜನಿ ಡ್ಯಾಂನಿಂದ ಭೀಮಾ ನದಿಗೆ ನೀರು ಬಿಡಲು ಸರಕಾರದಿಂದಾರೂ ಅಥವಾ ಟ್ರಿಬುನಲ್ ಗೆ ಅರ್ಜಿ ಸಲ್ಲಿಸಿಯಾದರೂ ನಮಗೆ ನೀರು ಬಿಡುವಂತೆ ಮಾಡಲು ಸಿಎಂ ಅವರಿಗೆ ಮನವಿ ಮಾಡಲಾಗುವುದು ಎಂದರು.
ಪ್ರತಿ ವರ್ಷ ಮಳೆಗಾಲವೂ ಸೇರಿದಂತೆ ಹಕ್ಕಿನ ನೀರಾದ 15 ಟಿಎಂಸಿ ನೀರು ಭೀಮೆಗೆ ಹರಿಸಬೇಕು. ಆದರೆ, ಈ ನೀರು ಯಾವ ವರ್ಷವೂ ಬಿಟ್ಟಿಲ್ಲ. ಕೇಳಿದರೆ ನೀರಿಲ್ಲ ಎನ್ನುವ ಸಿದ್ದ ಉತ್ತರ ಸಿಗುತ್ತದೆ. ಆದ್ದರಿಂದ ಮುಖ್ಯಮಂತ್ರಿ ಗಳು ಕಾವೇರಿಗೆ ನೀಡಿದಷ್ಟೇ ಪ್ರಾಮುಖ್ಯತೆ ಭೀಮಾ ನದಿಗೂ ಕೊಟ್ಟು ನೀರು ಬಿಡಿಸಬೇಕು ಎಂದರು.
ಕೃಷ್ಣೆಯ ನೀರಾದರೂ ಬಿಡಿ: ಈಗಾಗಲೇ ಅಫಜಲಪುರ ತಾಲೂಕಿನ ಭೋಗನಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿಗಾಗಿ ಆಹಾಕಾರ ಉಂಟಾಗಿದೆ. 200ಕ್ಕೂ ಹೆಚ್ಚು ರೈತರು ನನ್ನ ಮನೆಗೆ ಬಂದು ಪರಿಸ್ಥಿತಿ ಹೇಳಿಕೊಂಡು ಗೋಳಾಡಿದರು. ನೀರಿಲ್ಲ, ವಿದ್ಯುತ್ ಇಲ್ಲ, ಮಳೆಯೂ ಇಲ್ಲ. ಕಣ್ಣ ಮುಂದೆ ಬೆಳೆ ಒಣಗಿ ಹೋಗುತ್ತಿವೆ. ಜಾನುವಾರುಗಳಿಗೂ ನೀರಿಲ್ಲ. ಹೀಗಾದರೆ ನಮ್ಮ ಗತಿ ಏನು ಎಂದು ಪ್ರಶ್ನಿದರು ಎಂದು ಪಾಟೀಲ ಖೇದ ವ್ಯಕ್ತಪಡಿಸಿದರು.
ಆದ್ದರಿಂದ, ಇಂಡಿ ಶಾಖಾ ಕಾಲುವೆಯಿಂದ ತುರ್ತು ನೀರು ಹರಿಸುವಂತೆ ಆಗ್ರಹಿಸಿದರು.
ಈ ಕುರಿತು ಕಳೆದ ಎರಡು ತಿಂಗಳ ಹಿಂದೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಡಿ ಶಾಖಾ ಕಾಲುವೆ ಮೂಲಕ ಭೀಮಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಲಾಗಿತ್ತ. ನೀರು ಹರಿಸಲು ಎಸ್ಟಿಮೆಟ್ ರೆಡಿ ಮಾಡಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಈ ವೇಳೆಯಲ್ಲಿ ರೈತರಾದ ಲತೀಫ್ ಪಟೇಲ್, ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ ಅನೇಕರು ಇದ್ದರು.