Advertisement

ಪಠ್ಯಪುಸ್ತಕಕ್ಕೂ ಸಿಗಲಿ ತಾಂತ್ರಿಕ ಮೆರುಗು

11:44 AM Feb 06, 2020 | Naveen |

ಕಲಬುರಗಿ: ಸಾಂಪ್ರದಾಯಿಕ ಸ್ಥಿತಿಯಲ್ಲಿರುವ ಶಾಲಾ ಪಠ್ಯಗಳು ವಿದ್ಯುನ್ಮಾನ ರೂಪ ಪಡೆಯಬೇಕಾದ ಅಗತ್ಯವಿದೆ ಎಂದು ಹಿರಿಯ ತಂತ್ರಾಂಶ ತಜ್ಞ ಜಿ.ಎನ್‌. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

Advertisement

ಭಾಷಾ ಕಲಿಕೆಯಲ್ಲಿ ತಂತ್ರಜ್ಞಾನ ಎಂಬ ವಿಷಯದ ಕುರಿತು ಮಾತನಾಡಿದ ಅವರು, ನಮ್ಮ ಪಠ್ಯಪುಸ್ತಕಗಳು ಇನ್ನೂ ಸಿದ್ಧ ಸಂಪ್ರದಾಯದಲ್ಲಿಯೇ ಇವೆ. ಅವುಗಳಿಗೆ ತಂತ್ರಜ್ಞಾನದ ಸ್ಪರ್ಶ ನೀಡಬೇಕಾಗಿದೆ. ಆಗ ಮಾತ್ರ ಕನ್ನಡ ಭಾಷೆ ಮತ್ತಷ್ಟು ಜನಸಾಮಾನ್ಯರ ಭಾಷೆಯಾಗಿ ಉಳಿಯಲು ಸಾಧ್ಯ ಎಂದು ಹೇಳಿದರು.

ಭಾಷಾ ಕಲಿಕೆ ಒಂದೇ ರೀತಿಯಲ್ಲಿ ಇಲ್ಲ. ಅದು ಪ್ರದೇಶವಾರು ಭಿನ್ನವಾಗಿದೆ. ಹಲವು ವಿಶ್ವವಿದ್ಯಾಲಯಗಳು, ಸಂಘ-ಸಂಸ್ಥೆಗಳು ಕನ್ನಡ ಭಾಷೆ ಕಲಿಸುವ ನಿಟ್ಟಿನಲ್ಲಿ ಮಗ್ನವಾಗಿವೆ. ಆದರೆ ಕನ್ನಡವನ್ನು ಇನ್ನೂ ವೈಜ್ಞಾನಿಕ ರೀತಿಯಲ್ಲಿ ಕಲಿಸುವಂತಹ ಕೆಲಸವನ್ನು ಶಾಲಾ-ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ, ತನ್ನ ತಂತ್ರಾಂಶಗಳ ಮೂಲಕ ಕನ್ನಡ ಕಲಿಸುವ ಉಪಯುಕ್ತ ಕೆಲಸ ಮಾಡುತ್ತಿದೆ ಎಂದರು.

ಸರ್ಕಾರ ಕನ್ನಡ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್‌ ಕಲಿಕೆ ಮುಂದಾಗುತ್ತಿರುವ ಈ ಹೊತ್ತಿನಲ್ಲಿ ಕನ್ನಡ ತಂತ್ರಾಂಶದ ಅಭಿವೃದ್ಧಿಯ ಬಗ್ಗೆ ಆಲೋಚನೆ ನಡೆಯಬೇಕಾಗಿದೆ. ಶಾಲಾ ಹಂತದಲ್ಲಿ ಇ-ಪುಸ್ತಕಗಳು ಬರಬೇಕಾಗಿದೆ. ಮಕ್ಕಳು ಬರೆದ ಕಥೆ, ಕವಿತೆಗಳನ್ನು ಇ-ಪುಸ್ತಕಗಳಲ್ಲಿ ಪ್ರಕಟಿಸಿದಾಗ ಭಾಷಾ ಕಲಿಕೆ ಜತೆಗೆ ಕನ್ನಡ ಕೂಡ ಮತ್ತಷ್ಟು ಮಕ್ಕಳ ಸ್ನೇಹಿ ಆಗಿ ಹತ್ತಿರವಾಗಲಿದೆ ಎಂದು ಹೇಳಿದರು.

ಈಗಾಗಲೇ ಮೊಬೈಲ್‌ಗ‌ಳಲ್ಲಿ ಕನ್ನಡ ಕಲಿಕೆ ಬಗ್ಗೆ ಸಾಕಷ್ಟು ತಂತ್ರಾಂಶಗಳ ಬಂದಿವೆ. ಹದಿನೈದರಿಂದ ಇಪ್ಪತ್ತು ತಂತ್ರಾಂಶಗಳು ಕಾರ್ಯನಿರತವಾಗಿವೆ. ತಂತ್ರಾಂಶದ ಜತೆಗೆ ಕನ್ನಡ ಕಲಿಸುವಂತಹ ಕಾರ್ಯ ಕನ್ನಡ ಶಾಲೆಗಳಲ್ಲಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಜಿ.ಎನ್‌.ನರಸಿಂಹಮೂರ್ತಿ ನುಡಿದರು.

Advertisement

ವಿಡಿಯೋ ಮತ್ತು ಕೇಳುವ ತಂತ್ರಜ್ಞಾನ ಹೊತ್ತಿಗೆಗಳು ಕೂಡ ಕನ್ನಡ ಬೆಳವಣಿಗೆಗೆ ಪೂರಕವಾಗಲಿದೆ. ಬಹುಮಾಧ್ಯಮ ಸಂವಹನದ ಮೂಲಕ ಕನ್ನಡ ಕಲಿಸಲಾಗುತ್ತದೆ. ಇಂತಹ ಮತ್ತಷ್ಟು ಸರಳೀಕೃತ ತಂತ್ರಜ್ಞಾನಗಳು ಕನ್ನಡಕ್ಕೆ ಬರುವ ಅಗತ್ಯವಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಇ-ತಂತ್ರಾಂಶ ಸಲಹೆಗಾರ ಬೇಳೂರು ಸುದರ್ಶನ ಮಾತನಾಡಿ, ಕನ್ನಡ ಭಾಷೆ ಕೀಲಿಮಣೆ ಸಮಸ್ಯೆ, ಅಕ್ಷರ ಸಂವಹನ ಸೇರಿದಂತೆ ತಂತ್ರಾಂಶಕ್ಕೆ ಸಂಬಂಧಿಸಿದ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಕ್ತ ತಂತ್ರಜ್ಞಾನ ನೀತಿ ಜಾರಿಯಾಗಬೇಕಾದ ಅಗತ್ಯವಿದೆ ಎಂದರು.

ಖಾಸಗಿ ನಿಯಂತ್ರಣದಿಂದ ಪಾರಾಗಲು ಸರ್ಕಾರ ಕೂಡ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ತಂತ್ರಾಂಶಗಳನ್ನು ದೇಶೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಯಿರಿಸಿದೆ. ತಂತ್ರಜ್ಞಾನವನ್ನು ಮುಕ್ತ ಜ್ಞಾನವನ್ನಾಗಿಸುವ ನೀಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಯುನಿಕೋಡ್‌ ಅನ್ನು ಎಲ್ಲರೂ ಬಳಕೆ ಮಾಡುವಂತಾದರೆ ಈ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬಹುದಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next