ಕಡಬ: ಇಲ್ಲಿನ ಕಳಾರ ಅಂಗನವಾಡಿ ಕೇಂದ್ರದ ಹಳೆಯ ಕಟ್ಟಡ ಸಂಪೂರ್ಣ ಶಿಥಲಗೊಂಡಿದ್ದು, ನೂತನ ಕಟ್ಟಡದ ನಿರ್ಮಾಣ ಕಾಮಗಾರಿ ಅರ್ಧ ದಲ್ಲಿಯೇ ಸ್ಥಗಿತಗೊಂಡ ಕಾರಣದಿಂದಾಗಿ ಕೇಂದ್ರದ ಪುಟಾಣಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
ಪ್ರಸ್ತುತ ಇರುವ ಸುಮಾರು 30 ವರ್ಷ ಹಳೆಯದಾದ ಕಟ್ಟಡ ಶಿಥಿಲಗೊಂಡಿರುವ ಕಾರಣ ದಿಂದಾಗಿ ಅಂಗನವಾಡಿ ಪುಟಾ ಣಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಹತ್ತಿರದಲ್ಲಿರುವ ಕಳಾರ ಸರಕಾರಿ ಕಿ.ಪ್ರಾ.ಶಾಲೆಯ ಕೊಠಡಿಯೊಂದಕ್ಕೆ ಸ್ಥಳಾಂತರಿಸ ಲಾಗಿತ್ತು. ಆದರೆ ಸ್ಥಳಾಂತರ ಗೊಂಡ ಕಟ್ಟಡದ ಛಾವಣಿಯೂ ಅಪಾಯದ ಸ್ಥಿತಿಯಲ್ಲಿದೆ. ಅಂಗನವಾಡಿಗೆ ನಿರ್ಮಿಸ ಲಾಗುತ್ತಿರುವ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ, ಈ ಹಿನ್ನೆಲೆಯಲ್ಲಿ ಪುಟಾಣಿಗಳಿಗೆ ಹಳೆಯ ಕಟ್ಟಡವೂ ಇಲ್ಲದೆ, ಹೊಸಕಟ್ಟಡವೂ ಪೂರ್ಣಗೊಳ್ಳದೆ ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ. 15 ದಿನದೊಳಗೆ ಕಾಮಗಾರಿ ಪೂರ್ಣಗೊಂಡು ಅಂಗನವಾಡಿ ಕೇಂದ್ರ ಹೊಸ ಕಟ್ಟಡದಲ್ಲಿ ಪ್ರಾರಂಭವಾಗದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯ ಮುಂದಾಳು ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹನೀಫ್ ಕೆ.ಎಂ. ಎಚ್ಚರಿಸಿದ್ದಾರೆ.
10 ಲಕ್ಷ ರೂ. ವೆಚ್ಚದ ಕಟ್ಟಡ:
ಕಳಾರ ಅಂಗನವಾಡಿಗೆ ಹೊಸ ಕಟ್ಟಡ ಅಗಬೇಕೆಂಬ ಸ್ಥಳೀಯರ ಬೇಡಿಕೆಯ ಅನ್ವಯ ಕಡಬ ಗ್ರಾ.ಪಂ. ಅವಧಿಯಲ್ಲಿ ಉದ್ಯೋಗ ಖಾತರಿ ಯೋಜನೆಯಿಂದ 5 ಲಕ್ಷ ರೂ. ಹಾಗೂ ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿಯಿಂದ 5 ಲಕ್ಷ ರೂ. ಸೇರಿ ಒಟ್ಟು 10 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಟೈಲ್ಸ್ ಅಳವಡಿಕೆ, ಕಿಟಕಿ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳು ಬಾಕಿಯಾಗಿದೆ. ಕಟ್ಟಡದ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಿದ ಗುತ್ತಿಗೆದಾರರು ಬಾಕಿ ಉಳಿದ ಕೆಲಸವನ್ನು ಮುಗಿಸಿದರೆ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಮಾಹಿತಿಯನ್ನು ಪಡೆಯಲು ಪಟ್ಟಣ ಪಂಚಾಯತ್ ಎಂಜಿನಿಯರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂದು ಕೆ.ಎಂ.ಹನೀಫ್ ದೂರಿದ್ದಾರೆ.
ಕಳಾರ ಅಂಗನವಾಡಿಯ ಹೊಸ ಕಟ್ಟಡದ ಕಾಮಗಾರಿ ವಿಳಂಬದಿಂದಾಗಿ ಸಮಸ್ಯೆ ಎದುರಾಗಿದೆ. ಸಂಬಂಧಪಟ್ಟವರಲ್ಲಿ ಈ ಕುರಿತು ಚರ್ಚಿಸಿದ್ದು, ವಾರದೊಳಗೆ ಕಾಮಗಾರಿ ಮುಗಿಸಿಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ.
-ಶ್ರೀಲತಾ, ಸಿಡಿಪಿಒ, ಪುತ್ತೂರು
-ನಾಗರಾಜ್ ಎನ್.ಕೆ.