ಪುಂಜಾಲಕಟ್ಟೆ: ಬಂಟ್ವಾಳ ತಾ| ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ 6ನೇ ವರ್ಷದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಕಕ್ಯಬೀಡು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ ನಾಯಕ್ ಉಳಿ ಮಾತನಾಡಿ, ತುಳುವರ ನಂಬಿಕೆಯ ಕಂಬಳ ಕ್ರೀಡೆ ನಮ್ಮ ಮಣ್ಣಿನ ಸಂಸ್ಕೃತಿಯಾಗಿದ್ದು, ಕೃಷಿಕರ ಜೀವನದ ಭಾಗವಾಗಿದೆ. ಕಂಬಳ ಈ ಮಣ್ಣಿನ ಶಕ್ತಿಯ, ಮಣ್ಣಿನ ಗುಣದ ಆರಾಧನ ಪದ್ಧತಿ ಎಂದರು.
ಪ್ರಗತಿಪರ ಕೃಷಿಕ ಕಜೆಕಾರು ಕೆ. ಸುಂದರ ಪೂಜಾರಿ ಕೊಲೆಂಜಿಕೋಡಿ ಅವರು ಕಂಬಳ ಕರೆಯನ್ನು ಉದ್ಘಾಟಿಸಿದರು. ಬಳಿಕ ಕೋಟಿ – ಚೆನ್ನಯ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಹಿರಿಯ ಕಂಬಳ ಓಟಗಾರ ಜಯಶೆಟ್ಟಿ ಉದ್ಘಾಟಿಸಿದರು.
ವೇ| ಮೂ| ರಾಘವೇಂದ್ರ ಭಟ್ ಕೊಡಂಬೆಟ್ಟು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ, ಪ್ರಗತಿಪರ ಕೃಷಿಕ ಬಾಬು ಗೌಡ ಪೆಂರ್ಗಾಲು, ಸ್ಥಳದಾನಿ ತುಕ್ರಪ್ಪ ಗೌಡ, ಉಳಿ ಗ್ರಾ.ಪಂ. ಸದಸ್ಯ ಚಿದಾನಂದ ರೈ, ಪ್ರಗತಿಪರ ಕೃಷಿಕ ಸುಧಾಕರ ಶೆಟ್ಟಿ ಶಂಕರಬೆಟ್ಟು,ಜಯ ಪೂಜಾರಿ ಕುಕ್ಕಾಜೆ, ಪ್ರವೀಣ್ ಶೆಟ್ಟಿ ಕಿಂಜಾಲು, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಉಮೇಶ್ ಪೂಜಾರಿ, ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಗೆಳೆಯರ ಬಳಗದ ಪದಾಧಿಕಾರಿಗಳಾದ ಪುರುಷೋತ್ತಮ ಪಲ್ಕೆ, ಸುರೇಶ್ ಮೈರ, ಮಹಾಕಾಳಿ ಮಹಿಳಾ ಮಂಡಲ ಅಧ್ಯಕ್ಷೆ ಚಂದ್ರಕಲಾ ಯತೀಂದ್ರ ಚೌಟ ಮತ್ತಿತರರು ಉಪಸ್ಥಿತರಿದ್ದರು.
ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿ, ಮಾಜಿ ಅಧ್ಯಕ್ಷ, ನ್ಯಾಯವಾದಿ ರಂಜಿತ್ ಮೈರ ವಂದಿಸಿದರು. ಪ್ರಶಾಂತ ಮೈರ ನಿರೂಪಿಸಿದರು. ಇದಕ್ಕೂ ಮುನ್ನ ಮೈರ ಶ್ರೀ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಸಹ ಪರಿವಾರ ದೈವಗಳಿಗೆ ವಿಶೇಷ ಪೂಜೆ ನಡೆದ ಬಳಿಕ ಓಟದ ಕೋಣಗಳನ್ನು ಕಂಬಳಗದ್ದೆಗೆ ಅದ್ದೂರಿಯ ಮೆರವಣಿಗೆಯಲ್ಲಿ ತರಲಾಯಿತು.
ಪ್ರಧಾನ ತೀರ್ಪುಗಾರರಾದ ಎಂ. ರಾಜೀವ ಶೆಟ್ಟಿ ಎಡ್ತೂರು, ನಿರಂಜನ್ ರೈ ಕೋಡ್ಯಾಡಿ, ಉದ್ಘೋಷಕರಾದ ಸತೀಶ್ ಹೊಸ್ಮಾರು, ಮಹಾವೀರ ಜೈನ್, ಪ್ರಕಾಶ್ ಕರ್ಲ, ಕಂಬಳ ಕರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಲೇರಿಯನ್ ಡೇಸಾ, ಸುದೇಶ್ ಕುಮಾರ್, ಸಂಕಪ್ಪ ಶೆಟ್ಟಿ, ಶ್ರೀಧರ್ ಆಚಾರ್ಯ ಮತ್ತಿತರರು ಕಂಬಳ ನಿರ್ವಹಣೆಯ ವಿವಿಧ ವಿಭಾಗಗಳಲ್ಲಿ ಸಹಕರಿಸಿದ್ದರು. ಕಂದಾಯ, ಪೊಲೀಸ್, ಪಶು ವೈದ್ಯಕೀಯ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿತ್ತು.
ಅಭಿನಂದನೀಯ
ನಿಯಮ ಪಾಲನೆ, ಶಿಸ್ತಿಗೆ ಪ್ರಾಧಾನ್ಯ ನೀಡಿ ಕಂಬಳವನ್ನು ವ್ಯವಸ್ಥಿತವಾಗಿ ಸಂಘಟಿಸಿದ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅಭಿನಂದನೀಯರು.
– ದಾಮೋದರ ನಾಯಕ್
ಅಧ್ಯಕ್ಷರು, ಶ್ರೀಕ್ಷೇತ್ರ ಕಕ್ಯಬೀಡು
ಜೀರ್ಣೋದ್ಧಾರ ಸಮಿತಿ