ಕಕ್ಕೇರಾ: ತಿಂಥಣಿ ಗ್ರಾಪಂ ಗ್ರಂಥಾಲಯದಲ್ಲಿ ಉತ್ತಮ ವಾತಾವರಣ, ನಿಶ್ಯಬ್ದರಹಿತ ಪರಿಸರ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳೆಲ್ಲವೂ ಇದ್ದು, ಓದುಗರನ್ನು ಸೆಳೆಯುತ್ತಿದೆ. ಕೆಲ ಗ್ರಂಥಾಲಯಗಳು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವಾಗ ತಿಂಥಣಿ ಗ್ರಾಪಂ ಸಾರ್ವಜನಿಕ ಗ್ರಂಥಾಲಯದಲ್ಲಿ ಎಲ್ಲ ಸೌಕರ್ಯವಿದೆ.
ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಇದೆ. ಒಂದು ವೇಳೆ ವಿದ್ಯುತ್ ವ್ಯತ್ಯಯ ಉಂಟಾದಾಗ ಪರ್ಯಾಯ ಬೆಳಕಿಗೆ ಇನವರ್ಟರ್ ಬ್ಯಾಟರಿ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಅಧ್ಯಯನ ಮಾಡಲು ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಓದುಗರು.
5,500 ಪುಸ್ತಕಗಳು: ಗ್ರಂಥಾಲಯದಲ್ಲಿ ಒಟ್ಟು 5,500 ಪುಸ್ತಕಗಳು ಇವೆ. 275 ಸದಸ್ಯರ ಸಂಖ್ಯೆ ಹೊಂದಿದೆ. ಶಾಲಾ-ಕಾಲೇಜು ರಜೆ ಇದ್ದಾಗ ಹಾಗೂ ಬಿಡುವಿನ ವೇಳೆ ವಿದ್ಯಾರ್ಥಿಗಳು ಮತ್ತು ಪ್ರಜ್ಞಾವಂತ ಸಾರ್ವಜನಿಕರು ಪ್ರತಿ ನಿತ್ಯ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಹೀಗೆ ಓದುಗರಿಗೆ ಜ್ಞಾನದ ಅರಿವು ಮೂಡಿಸುವಂತೆ ಜ್ಞಾನಪೀಠ ಪ್ರಶಸ್ತಿ ವಿಜೇತರ ಫೋಟೋ ಹಾಗೂ ರಾಷ್ಟ್ರೀಯ ನಾಯಕರ ಭಾವಚಿತ್ರ, ಐತಿಹಾಸಿಕ ಸ್ಥಳಗಳ ಮಾಹಿತಿ ಫಲಕಗಳನ್ನು ಗ್ರಂಥಾಲಯ ಗೋಡೆ ಮೇಲೆ ಹಾಕಿದ್ದು ಓದುಗರನ್ನು ಆಕರ್ಷಿಸುತ್ತಿದೆ. ಹೀಗಾಗಿ ಇಲ್ಲಿನ ಜನರಿಗೆ ಗ್ರಂಥಾಲಯ ಬಹುಪಯೋಗಿಯಾಗಿದೆ ಎಂದು ಓದುಗರು ಹೇಳುತ್ತಾರೆ.
ಸೇವಾ ಪುರಸ್ಕಾರ: ಪುಸ್ತಕಗಳ ಅಭ್ಯಾಸಕ್ಕೆ ಓದುಗರಿಗೆ ಪ್ರೇರೇಪಿಸುವುದು ಮತ್ತು ಸ್ವಚ್ಛತೆ ಕಾಪಾಡುವುದು, ಸದಸ್ಯತ್ವ ಹೆಚ್ಚಿಸಿ ಗ್ರಂಥಾಲಯ ಪ್ರಗತಿಗೆ ಶ್ರಮಿಸಿದವರನ್ನು ಪರಿಗಣಿಸಿ ಮೇಲ್ವಿಚಾರಕ ಗಂಗಾಧರ ನಾಯಕ್ ಅವರಿಗೆ ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ “ಸಿಬ್ಬಂದಿ ಸೇವಾ ಪುರಸ್ಕಾರ ಪ್ರಶಸ್ತಿ’ ನೀಡಿ ಗೌರವಿಸಿದೆ.
ಹೀಗೆ ಅಭಿವೃದ್ಧಿಯತ್ತ ಸಾಗಿದ ಗ್ರಂಥಾಲಯಕ್ಕೆ ಆದಾಯ ಕೂಡ ಬರುತ್ತದೆ. ಇಲ್ಲಿಯವರೆಗೂ ಸದಸ್ಯತ್ವ ಪಡೆದ ಹಣ-4730 ರೂ., ಹಳೆಯ ಪತ್ರಿಕೆ ಮಾರಾಟ-5694 ರೂ. ಹಾಗೂ ಆಕಸ್ಮಿಕವಾಗಿ ಪುಸ್ತಕ ಕಳೆದ ಸದಸ್ಯರಿಗೆ ದಂಡ ಸಹಿತ 500 ರೂ.ಸೇರಿ ಒಟ್ಟು 11,200 ರೂ. ಆದಾಯ ಠೇವಣಿ ಇದೆ ಎನ್ನುತ್ತಾರೆ ಮೇಲ್ವಿಚಾರಕರು.