ಕಕ್ಕೇರಾ: ದೇವಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮೂರು ವರ್ಷಗಳಿಂದಲೂ ಇಲ್ಲಿನ ಜನರಿಗೆ ಕಾಡುತ್ತಿದ್ದರೂ ಇವರೆಗೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಗ್ರಾಮಸ್ಥರು ಖಾಲಿ ಕೊಡ ಹಿಡಿದುಕೊಂಡು ಪರದಾಡುವುದು ನಿತ್ಯ ನಡೆದಿದೆ.
ಬೇಸಿಗೆ ಸಂದರ್ಭ ಬೇರೆ ಹೀಗಾಗಿ ಕುಡಿಯುವ ನೀರಿಗಾಗಿ ಇಲ್ಲಿನ ಜನರು ಹಾತೋರಿಯಬೇಕಾಗಿದೆ. ಮನೆ ಮನೆಗೆ ನಳದ ನೀರು ಸರಬರಾಜು ಇದ್ದರೂ ಇಲ್ಲಿನ ಗ್ರಾಪಂ ಆಡಳಿತ ನಿರ್ಲಕ್ಷ್ಯ್ಯತನದಿಂದ ಅದೀಗ ಗ್ರಾಮಸ್ಥರು ನೀರಿನ ಸಮಸ್ಯೆ ಪಜೀತಿ ಅನುಭವಿಸಬೇಕಾಗಿದೆ. ಅಂದಾಗೇ ಗ್ರಾಪಂ ಹೊಂದಿದ ಗ್ರಾಮ ಇದಾಗಿದೆ. ಗ್ರಾಮದಲ್ಲಿ 12 ಜನ ಸದಸ್ಯರು ಇದ್ದಾರೆ. ಐದು ಸಾವಿರ ಜನಸಂಖ್ಯೆ ಇದೆ. ಆದರೂ ಗ್ರಾಪಂ ಆಡಳಿತ ಇರುವ ಊರಲ್ಲೇ ನೀರಿನ ಸಮಸ್ಯೆ ನೀಗಿಸಲಾಗಿಲ್ಲ. ಹಾಗಾಗಿ ಬೇರೆ ಗ್ರಾಮಗಳಲ್ಲಿ ಸಮಸ್ಯೆ ಹೇಗೆ ನಿಭಾಯಿಸುತ್ತಾರೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನ ಎನ್ನುತ್ತಾರೆ ಗ್ರಾಮಸ್ಥರು.
ಆಪರೇಟರ್ ನಿಷ್ಕಾಳಜಿಯೇ ಸಮಸ್ಯೆ?: ಕೊಳವೆ ಬಾವಿಯಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಆಗುತ್ತದೆ. ಆದರೆ ಆಪರೇಟರ್‌ನ ನಿಷ್ಕಾಳಜಿಯಿಂದಾಗಿ ಸರಿಯಾಗಿ ನೀರು ಬಿಡದ ಕಾರಣ ಅಲೆದಾಡಬೇಕಾಗಿದೆ. ಈ ಹಿಂದೆ ಕೃಷ್ಣಾನದಿಗೆ ಪೈಪ್‌ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಅವುಗಳು ಈಗ ಅಲ್ಲಲ್ಲಿ ಒಡೆದು ಹಾಳಾಗಿ ಪೂರೈಕೆ ಸ್ಥಗಿತಗೊಂಡಿದೆ. ಮತ್ತೆ ಅದನ್ನು ಸರಪಡಿಸಿದರೆ ಅನುಕೂಲವಾಗಲಿದೆ. ಇದಕ್ಕಾಗಿ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತಂದರು ನಮ್ಮ ಗೋಳು ದೇವರೇ ಬಲ್ಲ ಎಂಬಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.
ಆಪರೇಟರ್ ನೀರು ಪೂರೈಸುತ್ತಿಲ್ಲ. ಯಾರದೋ ತಪ್ಪಿಗೆ ಇನ್ಯಾರೋ ದೊಡ್ಡ ಫಜೀತಿ ಅನುಭವಿಸಬೇಕೇ? ಸುಡು ಬಿಸಿಲಿನಲ್ಲಿ ನೀರಿನ ಮೂಲ ಹುಡುಕಬೇಕಾಗಿದೆ. ಸಮಸ್ಯೆ ಕಣ್ಣಿಗೆ ರಾಜಿಸಿದರೂ ಯಾವೊಬ್ಬ ಅಧಿಕಾರಿ ಸಮಸ್ಯೆ ತಿಳಿಗೊಳಿಸಲು ಮುಂದೇ ಬಂದಿಲ್ಲ ಎಂದು ದೂರಿದ್ದಾರೆ. ಊರಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಅದಕ್ಕೂ ನೀರು ಪೂರೈಸುತ್ತಿಲ್ಲ. ಅದೀಗ ಹಾಳಾಗುವ ಹಂತಕ್ಕೆ ತಲುಪಿದೆ. ಸರಕಾರದ ಯೋಜನೆಗಳು ಯಾವ ರೀತಿ ಜನರಿಗೆ ಸದುಪಯೋಗ ಆಗುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಕೂಡ. ಹಾಗಾಗಿ ನೀರು ಸರಬರಾಜು ಮಾಡದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸರಕಾರ ಸಾಕಷ್ಟು ಅನುದಾನ ನೀಡುತ್ತದೆ. ಅದಾಗ್ಯೂ ನೀರಿನ ಸಮಸ್ಯೆ ಆಗದಂತೆ ಶಾಶ್ವತ ನೀರಿನ ಸೌಕರ್ಯ ಒದಗಿಸುವುದು ಸಂಬಂಧಿಸಿದ ಇಲಾಖೆ ಕರ್ತವ್ಯವಾಗಿದೆ. ಮೂರು ವರ್ಷದಿಂದಲೂ ನೀರಿನ ಸಮಸ್ಯೆ ಎದುರಿಸುವ ಇಲ್ಲಿನ ಗ್ರಾಮಕ್ಕೆ ಶಾಶ್ವತ ನೀರಿನ ಕಾಮಗಾರಿ ಯಾಕೆ ಒದಗಿಸಿಲ್ಲ. ಬರಗಾಲದಿಂದ ತತ್ತರಿಸಿದ್ದು, ಜಾನುವಾರುಗಳಿಗೂ ನೀರಿನ ಬಿಸಿ ತಟ್ಟಿದೆ. ಮನೆಯಲ್ಲಿಯೇ ಜಾನುವಾರುಗಳಿಗೆ ನೀರು ಕುಡಿಸಬೇಕಾಗಿದೆ. ಸಮಸ್ಯೆ ಗಂಭೀರವಾಗಿರುವುದರಿಂದ ಹನಿ ಹನಿ ನೀರಿಗೂ ಕೊರಗಬೇಕಾಗಿದೆ. ನಮ್ಮ ತಾಪತ್ರಯ ನಿವಾರಣೆಗೆ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸಮೇತ ನಾನು ದೇವಾಪುರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ತಿಳಿದುಕೊಂಡು ಈ ಬಗ್ಗೆ ಮುಂದಿನ ಕ್ರಮಕೈಗೊಳ್ಳಲಾಗುವುದು.
•ಜಗದೇವಪ್ಪ,
ತಾಪಂ ಇಒ ಸುರಪುರ
ಬಾಲಪ್ಪ ಎಂ. ಕುಪ್ಪಿ