Advertisement

ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಾಟಿ ಜೋರು

12:33 PM Dec 16, 2019 | Naveen |

ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ:
ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಗೂ ಬಸವಸಾಗರ ಜಲಾಶಯದಿಂದ ನೀರು ದೊರಕಿದ್ದರಿಂದ ಇದೀಗ ಭತ್ತ ನಾಟಿ ಚಟುವಟಿಕೆ ಜೋರಾಗಿದೆ. ಎಡದಂಡೆ ಮುಖ್ಯ ಕಾಲುವೆಗೆ ವಾರಬಂದಿ ಪದ್ಧತಿ ಮೂಲಕ ನೀರು ಹರಿಸುವ ಕುರಿತುನೀರಾವರಿ ಸಲಹಾ ಸಮಿತಿ ನಿರ್ಣಯಿಸಿದ್ದರಿಂದ ಹಿಂಗಾರು ಭತ್ತದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗಿದೆ. ಹೀಗಾಗಿ ಎರಡನೇ ಬೆಳೆಯೂ ರೈತರಿಗೆ ಈ ಭಾರಿ ಕೈಹಿಡಿಯಲಿದೆ ಎಂದು ಪ್ರದೇಶದ ರೈತ ನಂದಣ್ಣ ವಾರಿ ಹೇಳುತ್ತಾರೆ.

Advertisement

ಸುರಪುರ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 54,758 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಆದರೆ ಹಿಂಗಾರು ಹಂಗಾಮಿನಲ್ಲಿ ಭತ್ತ ನಾಟಿ ಕ್ಷೀಣಿಸಲಿದೆ. ಕೊನೆ ಭಾಗಕ್ಕೆ ಸಮರ್ಪಕ ನೀರು ಸಿಗುವುದು ಎಂಬ ಕಾರಣದಿಂದ ಕೆಲ ರೈತರು ಭತ್ತ ನಾಟಿಗೆ ಆಸಕ್ತಿ ತೋರಿಲ್ಲ ಎನ್ನಲಾಗಿದೆ.

ರೈತರು ಮುಂಗಾರು ಹಂಗಾಮಿನಲ್ಲಿ ಎಕರೆಗೆ 40-45 ಚೀಲ ಭತ್ತ ಇಳುವರಿ ಪಡೆದಿದ್ದಾರೆ. ಸರಕಾರ ಪ್ರತಿ ಕ್ವಿಂಟಲ್‌ ಭತ್ತಕ್ಕೆ ಬೆಂಬಲ ಬೆಲೆ ಸೇರಿ 1815, 1830 ರೂ. ದರದಲ್ಲಿ ಖರೀದಿಸುವಂತೆ ಆದೇಶಿಸಿದೆ. ಹೀಗಾಗಿ ಎಲ್ಲವೂ ದುಬಾರಿಯಾಗಿದೆ. ಸರಕಾರ ಘೋಷಿಸಿರುವ ಬೆಂಬಲ ಬೆಲೆ ತೀರಾ ಕಡಿಮೆಯಾಗುತ್ತದೆ. ಇದರಿಂದ ರೈತರು ಖರ್ಚು ಮಾಡಿದಕ್ಕೆ ಸಾಲುವುದಿಲ್ಲ. ಹೀಗಾಗಿ ಬೆಂಬಲ ಬೆಲೆ ಸೇರಿ ಪ್ರತಿ ಕ್ವಿಂಟಲ್‌ ಭತ್ತಕ್ಕೆ 3000ರಿಂದ 5000 ರೂ. ವರೆಗೂ ದರ ನೀಡಿದರೆ ಮಾತ್ರ ರೈತರಿಗೆ ಒಂದಿಷ್ಟು ಜೀವನ ಸುಧಾರಿಸಬಹುದು ಎಂದು ಸಂಘಟನೆಗಳ ಮುಖಂಡರು ಹೇಳಿದ್ದಾರೆ.

4.50 ಲಕ್ಷ ಹೆಕ್ಟೇರ್‌ಕ್ಕೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಬಸವಸಾಗರ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ಪ್ರಾಣಿ ಸಂಕುಲಕ್ಕೆ ಜೀವನಾಡಿಯಾಗಿದೆ. ಹಿಂಗಾರು ನಾಟಿಗಾಗಿ ರೈತರು ತಿಂಗಳ ಹಿಂದೆಯೇ ಭತ್ತದ ಮಡಿ ಹಾಕಿದ್ದರು. ರೈತರು ಈಗ ಕೂಲಿಕಾರ್ಮಿಕರನ್ನು ಬಳಸಿಕೊಂಡು ಭತ್ತ ನಾಟಿಯಲ್ಲಿ ತೊಡಗಿದ್ದಾರೆ. ಜತೆಗೆ ಕೂಲಿಕಾರ್ಮಿಕ ಬೇಡಿಕೆಯೂ ಹೆಚ್ಚಾಗಿದೆ. ಆಂಧ್ರದ ಗುಂತಕಲ್‌ ಹಾಗೂ ಅಚ್ಚುಕಟ್ಟು ಪ್ರದೇಶ ಕಾರ್ಮಿಕರನ್ನು ಕೃಷಿಗಾಗಿ ಬಳಸಿಕೊಳ್ಳಲಾಗುತ್ತದೆ.

ಭತ್ತ ನಾಟಿ ಮಾಡಲು ಕೂಲಿ ಕಾರ್ಮಿಕರಿಗೆ ಎಕರೆಗೆ 2000ದಿಂದ 2500 ರೂ. ಕೂಲಿ ಸಿಗುತ್ತದೆ. ಅಲ್ಲದೆ ಭತ್ತ ನಾಟಿ ಮಾಡಿದ ನಂತರ ದೀರ್ಘ‌ ಕಾಲ ಕೂಲಿ ದೊರೆಯಲಿದೆ. ಮಹಿಳೆಯರಿಗೆ ಪ್ರತಿ ದಿನಕ್ಕೆ 150 ರೂ. ಹಾಗೂ ಪುರುಷರಿಗೆ 300 ರೂ. ಕೂಲಿ ಸಿಗಲಿದೆ. ಹೀಗಾಗಿ ಈ ಪ್ರದೇಶದ ರೈತರಿಗೆ ಮತ್ತು ಕಾರ್ಮಿಕರಿಗೆ ಭತ್ತ ವ್ಯವಸಾಯ ಬದುಕಿಗೆ ಆಸರೆಯಾಗಿದೆ ಎನ್ನಬಹುದು.

Advertisement

ವಾರ ಬಂದಿ ಪ್ರಕಾರವೇ ರವಿವಾರ 15ರಂದು ಕಾಲುವೆಗೆ ನೀರು ಸ್ಥಗಿತಗೊಳಿಸಲಾಗಿದೆ. ಎಂಟು ದಿನ ಬಂದ್‌ ಮಾಡಿ ನಂತರ ಡಿ. 23ರಂದು ಎಡದಂಡೆ ಕಾಲುವೆಗೆ ನೀರು ಹರಿಸಲಾಗುತ್ತದೆ.
.ಎಸ್‌. ರಂಗರಾಮ,
ಅಧೀಕ್ಷಕ ಇಂಜಿನಿಯರ್‌,
ಬಸವಸಾಗರ ಅಣೆಕಟ್ಟು ವಿಭಾಗ ನಾರಾಯಣಪುರ

ಸರಕಾರ ಬೆಂಬಲ ಬೆಲೆ ಘೋಷಿಸುವುದರಿಂದ ರೈತರು ಸುಧಾರಿಸುವುದಿಲ್ಲ. ಒಕ್ಕಲುತನ ಉಳಿಯಲ್ಲ. ರೈತನ ಜೀವನ ಸುಧಾರಣೆಯಾಗಬೇಕಾದರೆ ಸರ್ಕಾರ ಡಾ| ಸ್ವಾಮಿನಾಥನ್‌ ಆಯೋಗದ ವರದಿ ಜಾರಿ ಮಾಡಬೇಕು.
.ಮಲ್ಲಿಕಾರ್ಜುನ ಸತ್ಯಂಪೇಟ ಕ.ರಾ. ರೈತ
ಸಂಘ(ಹಸಿರು ಸೇನೆ) ರಾಜ್ಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next