Advertisement

ಜೈವಿಕ ಇಂಧನ ಆಡಳಿತಾತ್ಮಕ ಕಚೇರಿಗಿಲ್ಲ ಉದ್ಘಾಟನೆ ಭಾಗ್ಯ

10:57 AM Jul 04, 2019 | Naveen |

ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ:
ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಜೈವಿಕ ಇಂಧನ ಆಡಳಿತಾತ್ಮಕ ಕಚೇರಿ ಇನ್ನೂ ಉದ್ಘಾಟನೆಗೊಂಡಿಲ್ಲ. ಆದರೂ ಅಧಿಕಾರಿಗಳು ರೈತರಿಗೆ ಕಣ್ತಪಿಸಿ ಕಚೇರಿಯೊಳಗೆ ಎಲ್ಲಾ ಕಾರ್ಯಗಳು ಸದ್ದಿಲ್ಲದೆ ನಡೆಸಿಕೊಂಡು ಬರಲಾಗುತ್ತಿದೆ.

Advertisement

ತಿಂಥಣಿ ಗ್ರಾಮದ ಬಳಿ ಇರುವ ರಾಜ್ಯದ ಎರಡನೇ ಜೈವಿಕ ಇಂಧನ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿರುವ ಆಡಳಿತ ಕಚೇರಿ ಕಟ್ಟಡದ ಸ್ಥಿತಿ ಇದು.

ಹೌದು, 2016-17ನೇ ಸಾಲಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ಅನುದಾನದಲ್ಲಿ ನಿರ್ಮಿಸಲಾಗಿದ್ದು. ಬಹುತೇಕ ಕಟ್ಟಡ ಕಾಮಗಾರಿ ಮುಗಿದು ವರ್ಷಗಳೇ ಕಳೆದಿದೆ. ಆದರೆ ಕಟ್ಟಡ ಉದ್ಘಾಟನೆ ಮಾಡದೆ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಯಾಕಿದು ಕಚೇರಿ?: ಜೈವಿಕ ಇಂಧನ ಪಾರ್ಕ್‌ ಸಲುವಾಗಿ ಉಸ್ತುವಾರಿ ವಹಿಸಿಕೊಂಡು ಪಾರ್ಕ್‌ ಅಭಿವೃದ್ಧಿಗೊಳಿಸಲು ಹಾಗೂ ಪಾರ್ಕ್‌ನಲ್ಲಿ ಇರುವ ವಿವಿಧ ಜಾತಿ ಮರಗಳನ್ನು ನಾಶವಾಗದಂತೆ ನೋಡಿಕೊಳ್ಳುವುದು. ಅಲ್ಲದೇ ಈ ಭಾಗದ ರಾಯಚೂರು ಜಿಲ್ಲಾ ಮತ್ತು ಯಾದಗಿರಿ ಜಿಲ್ಲಾ ಪ್ರದೇಶವನ್ನೊಳಗೊಂಡು ಈ ಭಾಗದ ಎಲ್ಲಾ ರೈತರಿಗೆ ಜೈವಿಕ ಇಂಧನದ ಬಗ್ಗೆ ರೈತರಿಗೆ ತರಬೇತಿ ನೀಡಿ ಪ್ರೋತ್ಸಾಯಿಸು ಉದ್ದೇಶದಿಂದ ಕಚೇರಿ ನಿರ್ಮಿಸಲಾಗಿದೆ.

ಕಟ್ಟಡದೊಳಗೆ ಜೈವಿಕ ಸಸ್ಯಗಳ ಬಗ್ಗೆ ಆಗಾಗ ರೈತರಿಗೆ ತರಬೇತಿ ನೀಡಲು ದೊಡ್ಡ ಹಾಲ್ ಕೂಡ ಮಾಡಲಾಗಿದೆ. ಇದರ ಉದ್ದೇಶ ಪ್ರತಿಯೊಬ್ಬ ರೈತರಿಗೆ ತರಬೇತಿ ನೀಡುವುದರ ಜತೆಗೆ ಪ್ರೋತ್ಸಾಯಿಸಿ ಜೈವಿಕ ಸಸಿಗಳ ನೆಡುವಂತೆ ಪ್ರೇರಿಪಿಸುವುದಾಗಿದೆ. ಆದರೆ ಇನ್ನೂ ಉದ್ಘಾಟನೆ ಆಗದೇ ಯಾರೊಬ್ಬರಿಗೆ ಇದರ ಬಗ್ಗೆ ಮಾಹಿತಿಯೇ ಗೊತ್ತಿಲ್ಲದಿರುವುದು ರೈತರ ದೌರ್ಭಾಗ್ಯವೇ ಸರಿ ಎನ್ನಲಾಗುತ್ತಿದೆ.

Advertisement

ಶಾಲಾ ಮಕ್ಕಳಿಗೂ ಜೈವಿಕ ಅರಿವು: ಈ ಭಾಗದ ಬಹುತೇಕ ಶಾಲಾ ವಿದ್ಯಾರ್ಥಿಗಳಿಗೂ ಜೈವಿಕ್‌ ಇಂಧನದ ಬಗ್ಗೆ ಹಾಗೂ ಸಸ್ಯಗಳ ಕುರಿತು ಅರಿವು ಮೂಡಿಸಬೇಕಿರುತ್ತದೆ. ಜೈವಿಕ್‌ ಇಂಧನ ಪಾರ್ಕ್‌ಗೆ ಭೇಟಿ ನೀಡಿದಾಗ ಆಡಳಿತಾತ್ಮಕ ಅಧಿಕಾರಿಗಳು ಶಾಲಾ ಮಕ್ಕಳಿಗೆ ಸಂಪೂರ್ಣ ಮಾಹಿತಿಯು ನೀಡಬೇಕಿದ್ದು, ಕಚೇರಿಯಲ್ಲಿ ಅಧಿಕಾರಿಗಳು ತಮಗೆ ತಿಳಿದಾಗ ಬರುವುದರಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಸಿಗುತ್ತಿಲ್ಲ ಎಂಬ ಇಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಪ್ರಯೋಜನಗಳೇನು?: ಕಚೇರಿ ಉದ್ಘಾಟನೆ ನಂತರ ಇಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ರೈತರು ತಮ್ಮ ಪಾಳು ಬಿದ್ದ ಜಮೀನು ಅಥವಾ ಜಮೀನುಗಳ ಬದುವಿನಲ್ಲಿ ಜೈವಿಕ ಇಂಧನ ಸಸಿಗಳು ಬೆಳೆಯಬಹುದಾಗಿದೆ. ರೈತರ ಬೆಳೆ ಜೈವಿಕ ಬೀಜಗಳನ್ನು ನೇರವಾಗಿ ಕಚೇರಿಯಲ್ಲಿನ ಅಧಿಕಾರಿಗಳು ಅವುಗಳ ಖರೀದಿ ಮಾಡಿಕೊಳ್ಳಬೇಕಿರುತ್ತದೆ. ರೈತರ ಅಭಿವೃದ್ಧಿ ಜತೆಗೆ ಈ ಭಾಗದ ನಿರುದ್ಯೋಗವನ್ನು ಹೋಗಲಾಡಿಸಬಹುದಾಗಿದೆ. ಪರಿಸರ ಸ್ನೇಹಿ ಜೈವಿಕ ಇಂಧನ ಪಾರ್ಕ್‌ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧಗೊಂಡಿರುವ ಆಡಳಿತ ಕಚೇರಿಯನ್ನು ಆದಷ್ಟು ಬೇಗ ಉದ್ಘಾಟಿಸಿ ಈ ಭಾಗದ ರೈತರಿಗೆ ತರಬೇತಿ ಸಿಕ್ಕು ಅಗತ್ಯ ಮಾಹಿತಿ ಅಧಿಕಾರಿಗಳಿಂದ ದೊರಕುವಂತಾಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಹಿಂದೇ ಉದ್ಘಾಟನೆ ಆಗಬೇಕಿತ್ತು. ಕೆಲ ಕಾರಣಾಂತರದಿಂದ ಹಾಗೇ ಮುಂದೂಡಬೇಕಾಯಿತು. ಅಗಸ್ಟ್‌ 10ರಂದು ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಇರುವುದರಿಂದ ಅಂದೇ ಈ ಆಡಳಿತ ಕಚೇರಿ ಉದ್ಘಾಟಿಸಲಾಗುವುದು.
•ಶ್ಯಾಮರಾವ್‌ ಕುಲಕರ್ಣಿ,
ಉಪ ಪ್ರಧಾನ ಅನ್ವೇಷಕರು,
ಜೈವಿಕ ಇಂಧನ ಪಾರ್ಕ್‌ ತಿಂಥಣಿ

Advertisement

Udayavani is now on Telegram. Click here to join our channel and stay updated with the latest news.

Next