ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲೀಗ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಹಿಂಗಾರು ಹಂಗಾಮಿನ ಭತ್ತ ಬೆಳೆಯಲು ಎಲ್ಲಿಯವರೆಗೆ ನೀರು ಹರಿಸಲಾಗುತ್ತದೆ ಎಂಬುದು ನೀರಾವರಿ ಸಲಹಾ ಸಮಿತಿ ಸಭೆ ಕರೆದು ಇನ್ನೂ ಸ್ಪಷ್ಟನೆ ನೀಡದ ಕಾರಣ ಈ ಭಾಗದ ರೈತರು ಹಿಂಗಾರು ಭತ್ತ ನಾಟಿಗಾಗಿ ಚಿಂತಾಕ್ರಾಂತರಾಗುವಂತೆ ಮಾಡಿದೆ.
ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾದ ಕಾರಣ ಪ್ರಸಕ್ತ ಸಾಲಿನಲ್ಲಿ ಬಸವಸಾಗರ ಜಲಾಶಯಕ್ಕೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬಂದಿದೆ. ಅಲ್ಲದೇ ಅಷ್ಟೇ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗಿದೆ. ಭರ್ತಿಯಾದ ಜಲಾಶಯದಿಂದ ರೈತರಿಗೆ ತುಸು ಖಷಿ ತಂದರೂ, ಎಡದಂಡೆ ಕಾಲುವೆ ಹಾಗೂ ಬಲದಂಡೆ ಕಾಲುವೆಗೆ ಎಷ್ಟುದಿನ ನೀರು ಹರಿಸಬಹುದು? ಈ ಕುರಿತು ಸಲಹಾ ಸಮಿತಿ ಸಭೆ ನಡೆಸಿ ಮಾಹಿತಿ ನೀಡದ ಕಾರಣ ರೈತರು ಚಿಂತೆ ಮಾಡುವಂತಾಗಿದೆ. ಮುಂಗಾರು ಭತ್ತ ಈಗಾಗಲೇ ತೆನೆ ಹಿರಿದು ಕಟಾವಿಗೆ ಬಂದಿದೆ. ಕೆಲವೇ ದಿನಗಳಲ್ಲಿ ರೈತರು ರಾಶಿ ಮಾಡಲು ಸಿದ್ಧರಾಗುತ್ತಾರೆ. ಅಲ್ಲದೇ ಹಿಂಗಾರು ಭತ್ತ ನಾಟಿಗಾಗಿ ಕೆಲ ರೈತರು ಸಸಿ ಮಾಡಿ ಹಾಕಿದ್ದಾರೆ.
ಇನ್ನು ಹಲವರು ಸಸಿ ಹಾಕಲು ಸಿದ್ಧತೆ ನಡೆಸಿದ್ದಾರೆ. ಜಲಾಶಯದಲ್ಲಿ ನೀರು ಇದೆ. ಎಡದಂಡೆ ಕಾಲುವೆಗೆ ಪೂರ್ಣ ನೀರು ಹರಿಸುತ್ತಾರೆ ಎಂಬ ದೃಢವಾದ ನಂಬಿಕೆಯಿಂದ ಸಸಿ ಹಾಕಿದ್ದೇವೆ ಎನ್ನುತ್ತಾರೆ ರೈತರು. ಕಳೆದ ವರ್ಷ ಮುಂಗಾರು ಮಾತ್ರ ಬೆಳೆದ ಅನ್ನದಾತರು ಹಿಂಗಾರು ಭತ್ತ ಬೆಳೆಯದೇ ಕೈ ಸುಟ್ಟುಕೊಂಡರು. ಬಹುತೇಕರು ಗುಳೆ ಹೋಗು ವಂತಾಗಿತ್ತು. ಪ್ರಸಕ್ತ ಸಾಲಿನಲ್ಲಿ ನೀರಿಗೆ ಬರವಿಲ್ಲ. ಹಿಂಗಾರು ಭತ್ತ ರೈತರ ಕೈಗೆ ಬರುವವರೆಗೂ ಕಾಲುವೆಗೆ ನೀರು ಹರಿಸಬಹುದಾಗಿದೆ. ಈ ಕುರಿತು ನೀರಾವರಿ ಸಲಹಾ ಸಮಿತಿ ಕೈಗೊಳ್ಳುವ ನಿರ್ಧಾರದ ಮೇಲೆ ರೈತರ ಭವಿಷ್ಯ ಅಡಗಿದೆ ಎಂಬುದು ರೈತ ಪರ ಸಂಘಟನೆ ಮುಖಂಡರ ಅಭಿಪ್ರಾಯ.
ವಾರ ಬಂದಿ ಕೈಬಿಡಿ : ಬಸವಸಾಗರದಲ್ಲಿ ಸದ್ಯ ನೀರಿಗೆ ಬರವಿಲ್ಲ. ಮಳೆಯಿಂದಾಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ನದಿಗೆ ನೀರು ಹರಿಸಲಾಗುತ್ತಿದೆ. ವಾರಾಬಂದಿಯಿಂದ ಭತ್ತ ಹಾಗೂ ಶೇಂಗಾ ಬೆಳೆಗಳು ಒಣಗಲಿವೆ. ಶಹಾಪುರ ಮತ್ತು ಜೇವರ್ಗಿ ತಾಲೂಕಿನ ಕೆಲ ಪ್ರದೇಶದಲ್ಲಿ ಶೇಂಗಾ, ಹತ್ತಿ ಇನ್ನಿತರ ಬೆಳೆಗಳಿಗೆ ನೀರು ತಲುಪದೇ ನಷ್ಟವೇ ಹೊಂದಬೇಕಿದೆ. ಹೀಗಾಗಿ ಅವೈಜ್ಞಾನಿಕ ವಾರಬಂದಿ ಪದ್ಧತಿ ನೀರಾವರಿ ಸಲಹಾ ಸಮಿತಿ ಕೈಬಿಡಬೇಕೆಂಬುದು ರೈತಪರ ಸಂಘಟನೆಗಳ ಒತ್ತಾಸೆಯಾಗಿದೆ.