ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ: ಆಲಮಟ್ಟಿಯಲ್ಲಿ ರವಿವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾರ್ಚ್ 20ರ ವರೆಗೆ ನೀರು ಹರಿಸಲು ತೆಗೆದುಕೊಂಡಿರುವ ನಿರ್ಧಾರ ಹಿಂಗಾರು ಹಂಗಾಮಿನ ಭತ್ತ ಬೆಳೆಗಾರರಿಗೆ ಸಂತೋಷ ತಂದಿದ್ದರೆ, ಶೇಂಗಾ, ಹತ್ತಿ ಸೇರಿದಂತೆ ಮುಂತಾದ ಬೆಳೆ ಬೆಳೆಯುವ ರೈತರಿಗೆ ಸ್ವಲ್ಪ ಅಸಮಾಧಾನವಾಗಿದೆ ಎನ್ನಲಾಗುತ್ತಿದೆ.
ಸಲಹಾ ಸಮಿತಿ ಮಾರ್ಚ್ 20ರ ವರೆಗೂ 8 ದಿನ ಬಂದ್ ಹಾಗೂ 14 ದಿನ ಕಾಲುವೆಗೆ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದರಿಂದ ಭತ್ತ ಬೆಳೆಗಾರರಿಗೆ ಖುಷಿ ತಂದಿದೆ. ಇನ್ನೂ ಕೊನೆ ಭಾಗದ ರೈತರಿಗೆ ಅಸಮಾಧಾನ ಮೂಡಿಸಿದೆ.
ಸಲಹಾ ಸಮಿತಿ ಕೆಲ ರೈತರಿಗೆ ಸಿಹಿ ಇನ್ನೂ ಕೆಲವರಿಗೆ ಕಹಿ ನೀಡಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಕಳೆದ ವರ್ಷದಲ್ಲಿ ಹಿಂಗಾರು ಬೆಳೆಗಳಿಗೆ ನೀರು ಸಿಗದೆ ಕಷ್ಟ ಅನುಭವಿಸಿದ್ದೇವು. 2019ನೇ ಸಾಲಿನಲ್ಲಿ ಹಿಂಗಾರು ಭತ್ತ ಬೆಳೆಯಲು ಎಲ್ಲಿಯವರೆಗೆ ನೀರು ಹರಿಸಲಾಗುತ್ತದೆ ಎಂಬ ಚಿಂತೆ ಕಾಡುತ್ತಿತ್ತು. ಈಗ ಮಾ. 20ರ ವರೆಗೂ ನೀರು ಹರಿಸಲಾಗುವುದು ಎಂದು ಸಲಹಾ ಸಮಿತಿ ಸ್ಪಷ್ಟಪಡಿಸಿದ್ದರಿಂದ ನಿಟ್ಟುಸಿರು ಬಿಟ್ಟಿದ್ದೇವೆ ಎನ್ನುತ್ತಾರೆ ರೈತರು.
ಅಚ್ಚುಕಟ್ಟು ಪ್ರದೇಶದ ಶಹಾಪುರ ತಾಲೂಕು ಹಾಗೂ ಸುರಪುರ, ಜೇವರ್ಗಿ ಕೊನೆ ಭಾಗದ ರೈತರು ಈಗಾಗಲೇ ಹತ್ತಿ, ಶೇಂಗಾ, ಇನ್ನಿತರ ಬೆಳೆ ಬೆಳೆದಿದ್ದಾರೆ. ವಾರಬಂದಿ ಪದ್ಧತಿ ಅನುಸರಿಸಿದರೆ ಕೊನೆ ಭಾಗದ ವಡಗೇರಾ, ಕೊಂಕಲ್, ಕುರಿಹಾಳ, ಕಾಡಮಗೇರಾ, ಕುರಕುಂದಿ ಪ್ರದೇಶದ ಜಮೀನುಗಳಿಗೆ ನೀರು ತಲುಪುವುದಿಲ್ಲ. ಹೀಗಾಗಿ ಕಣ್ಣೀರು ಹಾಕುವಂತಾಗಿದೆ ಎಂದು ಕೊನೆ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಸಿ ಹಾಕದ ರೈತರು ಮಡಿ ಹಾಕುವ ಕಸರತ್ತು ನಡೆಸಿದ್ದರೆ, ಇನ್ನೂ ಮುಂಚಿತವಾಗಿ ಸಸಿ ಹಾಕಿದ ರೈತರು ಮುಂಗಾರು ಭತ್ತ ಕಟಾವು ಮಾಡುತ್ತಿದ್ದಾರೆ. ಹೀಗಾಗಿ ಮುಂಗಾರು ಭತ್ತ ಕೊಯ್ಲು ಜೋರಾಗಿ ನಡೆದಿದೆ. ತಿಂಗಳ ಪರ್ಯಾಂತ ಭತ್ತ ಕಟಾವು ನಡೆಯುತ್ತದೆ. ಈಗಾಗಲೇ ಹಾಕಲಾಗಿರುವ ಸಸಿಗಳು ನಾಟಿ ಮಾಡುವ ಹಂತಕ್ಕೆ ಬರಲು ಒಂದು ತಿಂಗಳು ಕಾಯಬೇಕು. ಈ ನಡುವೆಯೂ ಮುಂಗಾರು ಭತ್ತ ಕಟಾವು ಮುಗಿಸಿ ಡಿಸೆಂಬರ್ ತಿಂಗಳಲ್ಲಿ ಹಿಂಗಾರು ಭತ್ತ ನಾಟಿಗೆ ಮಾಡಬೇಕು ಎಂದು ರೈತರು ತಿಳಿಸಿದ್ದಾರೆ.