ಕಕ್ಕೇರಾ: ಜೀವನದಲ್ಲಿ ಯಶಸ್ಸು ಕಾಣಲು ಆತ್ಮವಿಶ್ವಾಸ ಬಹಳ ಮುಖ್ಯವಾಗಿದೆ ಎಂದು ವ್ಯಕ್ತಿತ್ವ ವಿಕಾಸನ ತರಬೇತಿದಾರ ರಮೇಶ ಬಲ್ಲಿದ್ ಹೇಳಿದರು.
ಪಟ್ಟಣದ ಪ್ರೌಢಶಾಲಾ ಆವರಣದಲ್ಲಿ ರೈಸಿಂಗ್ ಸ್ಟಾರ್ ಗ್ರೂಫ್ ವತಿಯಿಂದ ರವಿವಾರ ಹಮ್ಮಿಕೊಂಡ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ ಹಾಗೂ ವ್ಯಕ್ತಿತ್ವ ವಿಕಾಸನ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯಾವುದೇ ಕೆಲಸ ಆದರೂ ಅದರಲ್ಲಿ ನಮಗೆ ತೃಪ್ತಿ ಇರಬೇಕು. ಕೀಳಿರಿಮೆ ಇಲ್ಲದೆ ಸಕರಾತ್ಮಕವಾಗಿ ಮುನ್ನಡೆದಾಗ ಹಿಡಿದ ಕಾರ್ಯ ಯಶಸ್ವಿಗೆ ಸುಲಭವಾಗುತ್ತದೆ ಎಂದು ತಿಳಿಸಿದರು.
ಸಮಯ ಮತ್ತು ಅವಕಾಶ ಮರಳಿ ಸಿಗುವುದಿಲ್ಲ. ಸಮಯ ಹಾಳು ಮಾಡದೆ ಸದ್ಬಳಕೆ ಮಾಡಿಕೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಹೀಗಾಗಿ ಟಿವಿ ಮಾಧ್ಯಮ, ಮೊಬೈಲ್, ಸಾಮಾಜಿಕ ಜಾಲ ತಾಣವನ್ನು ಒಳ್ಳೆಯದಕ್ಕೆ ಬಳಿಸಿ ಸದುಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಎಎಸ್ ಅಧಿಕಾರಿ ಪ್ರಭು ದೊರೆ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಭ್ಯಾಸ ಮಾಡಬೇಕಾಗಿದೆ. ಪ್ರತಿಯೊಂದು ವಿಷಯದಲ್ಲಿ ಪರಿಣಿತರಾದಾಗ ಉನ್ನತ ಮಟ್ಟದ ಗುರಿ ತಲುಪಬಹುದು ಎಂದರು.
ಇದೇ ವೇಳೆ ಕೆಎಎಸ್ ಅಧಿಕಾರಿ ಪ್ರಭು ದೊರೆ ಮತ್ತು ರಮೇಶ ಬಲಿದ್ ಅವರನ್ನು ಸನ್ಮಾನಿಸಲಾಯಿತು. ಪೂಜ್ಯ ಅಯ್ಯಣ್ಣ ಪೂಜಾರಿ, ಪುರಸಭೆ ಸದಸ್ಯ ಶರಣಕುಮಾರ ಸೊಲ್ಲಾಪುರ, ಡಾ| ವೀಣಾ ಚೆಟ್ಟರಕಿ, ರವಿ ರೆಡ್ಡಿ, ಬಸಯ್ಯಸ್ವಾಮಿ, ನಾನಾಗೌಡ, ಬಸವರಾಜ ಕೋಳ್ಕೂರು, ಮೋಹಿನ್ ಪಾಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.