ಕಕ್ಕೇರಾ: ಕೃಷ್ಣಾನದಿ ನೆರೆ ಹಾವಳಿಯಿಂದ ಹಾನಿಗೀಡಾದ ಕೆಲವು ರೈತರಿಗೆ ಇನ್ನು ಪರಿಹಾರ ಹಣ ಸಿಗದೆ ಕಷ್ಟ ಅನುಭವಿಸುವಂತಾಗಿದೆ. ಐದು ತಿಂಗಳು ಗತಿಸಿದರೂ ರೈತರಿಗೆ ಸಿಗಬೇಕಾದ ನೆರವು ಇವರೆಗೂ ದೊರಕಿಲ್ಲ. ಹೀಗಾಗಿ ರೈತರು ತೊಂದರೆ ಪಡುವಂತಾಗಿದೆ. ಕೃಷ್ಣಾ ನದಿ ನೆರೆಹಾವಳಿಯಿಂದ ಅನೇಕ ರೈತರು ನಷ್ಟ ಹೊಂದಿದ್ದಾರೆ. ನದಿ ತೀರದ ಭತ್ತ, ತೊಗರಿ, ಸಜ್ಜೆ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಜಲಾವೃತ್ತವಾಗಿ ರೈತರು ಭಾರಿ ನಷ್ಟ ಹೊಂದಬೇಕಾಯಿತು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸಜ್ಜೆ ಹಾಗೂ ನಾಟಿ ಮಾಡಿದ ಭತ್ತದ ಗದ್ದೆಗಳಿಗೆ ಕೃಷ್ಣಾ ನದಿ ನೀರು ನುಗ್ಗಿ ಬೆಳೆ ಹಾನೀಗಿಡಾಗುವಂತೆ ಮಾಡಿತು. ಹೀಗಾಗಿ ಹಾನಿಗೊಳಗಾದ ಕೆಲ ರೈತರಿಗೆ ಬೆಳೆ ಹಾನಿ ಪರಿಹಾರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಿದ್ದರೆ.
Advertisement
ಇನ್ನೂ ಕೆಲ ರೈತರಿಗೆ ಹಾನಿ ಪರಿಹಾರ ದೊರೆಯದೆ ವಿಳಂಬವಾಗಿದೆ. ಸಮೀಕ್ಷೆ ಮಾಡಿ ಐದು ತಿಂಗಳು ಗತಿಸಿದರೂ ಪರಿಹಾರ ಬಂದಿಲ್ಲ ಎಂದು ಕೃಷ್ಣಾನದಿ ತೀರದ ರೈತರು ನೋವು ತೋಡಿಕೊಂಡಿದ್ದಾರೆ.
Related Articles
Advertisement
ಆದರೆ ತಾಂತ್ರಿಕ ಕಾರಣದಿಂದಾಗಿ ಕೆಲವು ರೈತರಿಗೆ ಪರಿಹಾರ ಹಣ ಸಿಕ್ಕಿಲ್ಲ ಎಂದು ಮಾತು ಕೇಳಿ ಬರುತ್ತಿದೆ. ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಕಡ್ಡಾಯವಾಗಿದೆ. ಆದ್ದರಿಂದ ಖಾತೆಗೆ ಆಧಾರ ಜೋಡಣೆ ಮಾಡಿದ್ದರೆ ಮಾತ್ರ ರೈತರ ಖಾತೆಗೆ ಸರಕಾರದಿಂದ ನೆರವು ಸಿಗುತ್ತದೆ. ಹೀಗಾಗಿ ಆಧಾರ ಜೋಡಣೆ ಹೊಂದಿರದ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗುವುದಿಲ್ಲ. ಈ ಕುರಿತು ರೈತರು ಕೂಡ ಒಮ್ಮೆ ಬ್ಯಾಂಕ್ ಖಾತೆ ಪರಿಶೀಲಿಸಿ ಆಧಾರ್ ನೋಂದಾಯಿಸಬೇಕು.
ಇಷ್ಟೇ ರೈತರಿಗೆ ಪರಿಹಾರ ಸಿಕ್ಕಿದೆ ಎಂದು ಹೇಳಲು ಯಾವುದೇ ವಿವರ ಲಭ್ಯವಿಲ್ಲ. ಆದರೆ ಆಧಾರ ಲಿಂಕ್ ಹೊಂದಿದ ರೈತರಿಗೆ ಮಾತ್ರ ಪರಿಹಾರ ದೊರೆಯಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆ ಹಾವಳಿಯಿಂದ ಬೆಳೆ ಹಾನಿಯಾದ ಬಗ್ಗೆ ಜನಪ್ರತಿನಿಧಿಗಳು ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಆದರೆ ಇವರೆಗೂ ಪರಿಹಾರ ಬರದೇ ಇರುವುದು ರೈತರನ್ನು ಸಂಕಷ್ಟಕ್ಕೆ ದೂಡುವಂತಾಗಿದೆ.
ಹೀಗಾಗಿ ಕ್ಷೇತ್ರದ ಶಾಸಕರು ಹಾಗೂ ಸಂಸದರು ಸರಕಾರಕ್ಕೆ ಪ್ರಸ್ತಾಪಿಸಿ ಪರಿಹಾರ ದೊರಕಿಸಿಕೊಡುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ ಎಂಬುದು ರೈತರ ಒತ್ತಾಯವಾಗಿದೆ.
ಈಗಾಗಲೇ ಸರಕಾರದಿಂದ ನೇರವಾಗಿ ಕೆಲ ರೈತರ ಖಾತೆಗೆ ಪರಿಹಾರ ಹಣ ಬಂದಿದೆ. ರೈತರು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಬೇಕು. ತಾಲೂಕಿನಲ್ಲಿ ಪರಿಹಾರ ದೊರಕದೆ ಇದ್ದ ರೈತರ ಮಾಹಿತಿ ಪಡೆದು ಪರಿಹಾರಕ್ಕಾಗಿ ಮತ್ತೂಮೆ ಸರಕಾರಕ್ಕೆ ಪ್ರಸ್ತಾಪಿಸಲಾಗುವುದು. ಬಹುತೇಕ ರೈತರಿಗೆ ಪರಿಹಾರ ದೊರಕಿದೆ..ನಿಂಗಣ್ಣ ಬಿರಾದಾರ,
ತಹಶೀಲ್ದಾರ್ ಸುರಪುರ ಪ್ರವಾಹದಿಂದ 3 ಎಕರೆ ಭತ್ತ ನಾಶವಾಗಿದೆ. ಅಧಿಕಾರಿಗಳು ಅಗತ್ಯ ದಾಖಲಾತಿ ಪಡೆದಿದ್ದಾರೆ. ಇನ್ನು ಖಾತೆಗೆ ಪರಿಹಾರ ಹಣ ಜಮಾ ಆಗಿಲ್ಲ. ಜೀವನ ದುಸ್ಥಿತಿಯಾಗಿದೆ. ನಮಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು.
.ದೇವಿಂದ್ರಪ್ಪ ಬಿ. ಅಂಬಿಗೇರ,
ಹಾನಿಗೀಡಾದ ರೈತ ತಿಂಥಣಿ