Advertisement

ಕೊಳೆಯುತ್ತಿದೆ 2.50 ಕೋಟಿ ಅನುದಾನ

01:12 PM May 26, 2019 | Naveen |

ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ:
ನಗರೋತ್ಥಾನ ಯೋಜನೆಯಡಿ ಕಕ್ಕೇರಾ ಪ್ರಮುಖ ವಾರ್ಡ್‌ಗಳಲ್ಲಿ 3ನೇ ಹಂತದ ಕುಡಿಯುವ ನೀರಿನ ಸೌಕರ್ಯ ಒದಗಿಸಲು ನಗರಾಭಿವೃದ್ಧಿ ಕೋಶ ಅಧಿಕಾರಿಗಳು ಅಂದಾಜು ಪತ್ರಿಕೆ ತಯಾರಿಸಿ ಎರಡು ವರ್ಷವಾದರೂ ಟೆಂಡರ್‌ ಕರೆಯದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ.

Advertisement

2017-18ನೇ ಸಾಲಿನಲ್ಲಿ ನಗರತೋತ್ಥಾನ ಮೂರನೇ ಹಂತದ ಕುಡಿಯುವ ನೀರಿನ ಸಲುವಾಗಿ 2.50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದಕ್ಕೆ ಕಾಮಗಾರಿಗಾಗಿ ಅಂದಾಜು ಪತ್ರಿಕೆ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ ಬೇಸಿಗೆ ಮುಗಿಯುತ್ತ ಬಂದರೂ ಈವರೆಗೂ ಟೆಂಡರ್‌ ಕರೆಯುವಲ್ಲಿ ನಿಷ್ಕಾಳಜಿ ತೋರಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ವಿಪರಿತವಾಗಿ ಇದ್ದರೂ ಟೆಂಡರ್‌ ಕರೆದು ಬಗೆಹರಿಸುವ ಕಾರ್ಯಕ್ಕೆ ಮುಂದಾಗದೇ ನಿರ್ಲಕ್ಷ್ಯ ವಹಿಸಲಾಗಿದೆ ಎನ್ನಲಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಎರಡು ವರ್ಷದ ಹಿಂದೇ ಅನುದಾನ ಕಾಯ್ದಿರಿಸಲಾಗಿದೆ. ಬೀಕರ ಬರಗಾಲ ಬೇರೆ ಜನರು ನೀರಿಗಾಗಿ ಪರತಿಪಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಸರ್ಕಾರ ಅನುದಾನ ಒದಗಿಸಿದರೂ ಅಧಿಕಾರಿಗಳು ಸದ್ಬಳಿಕೆ ಮಾಡಿಕೊಳ್ಳುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ವಿಷಯದಲ್ಲಿ ಪುರಸಭೆ ಅಧಿಕಾರಿಗಳು ತಮಗೆ ತಿಳಿದಾಗ ಬರುವುದು. ಹೋಗುವುದು ಮಾಡುತ್ತಿದ್ದಾರೆ. ಕೋಟಿ ಕೋಟಿ ಅನುದಾನ ಬಂದರೂ ಈ ಭಾಗದಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ನಗರುತ್ಥಾನದಲ್ಲಿ 9 ಕೋಟಿ ಅನುದಾನದಲ್ಲಿ 6.50 ಕೋಟಿ ವೆಚ್ಚದಲ್ಲಿ ಪ್ರಮುಖ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಾಗಿ ಟೆಂಡರ್‌ ಕರೆದು ಕಾಮಗಾರಿ ಪ್ರಕ್ರಿಯೇ ಬಹುತೇಕ ಮುಗಿಸಲಾಗಿದೆ. ದುರಂತ ಇನ್ನೂ ಕುಡಿಯುವ ನೀರಿನ ಬವಣೆ ನೀಗಿಸಲು ಉಳಿದ ಬಾಕಿ 2.50 ಕೋಟಿ ರೂ. ಅನುದಾನದ ಟೆಂಡರ್‌ ಕರೆಯುವ ಪ್ರಯತ್ನ ಜಿಲ್ಲಾಡಳಿತ ನಡೆಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಬರೀ ಸಬೂಬು ಹೇಳಿಕೆ: ಕುಡಿಯುವ ನೀರಿನ ಸೌಕರ್ಯದ ಮೂರನೇ ಹಂತದ ಟೆಂಡರ್‌ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಪುರಸಭೆ ಮುಖ್ಯ ಅಧಿಕಾರಿ ವಿಚಾರಿಸಿದಾಗ ಕರೆಯಲಾಗುವುದು ಎಂದು ನಗರಾಭಿವೃದ್ಧಿ ಕೋಶಾಧಿಕಾರಿಯಿಂದ ಬರೀ ಸಬೂಬು ಉತ್ತರ ಹೇಳಿಕೊಂಡು ಬರಲಾಗುತ್ತಿದೆ ಎಂದು ಗೊತ್ತಾಗಿದೆ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇದ್ದ ಕಡೆಗೆ ನೀರಿನ ಸೌಕರ್ಯ ಕಲ್ಪಿಸಬೇಕಾದ ಅಧಿಕಾರಿಗಳ ನಿಷ್ಕಾಳಿಜಿಗೆ ಜನಸಾಮಾನ್ಯರು ವಿಪರಿತ ನೋವು ಎದುರಿಸಬೇಕಾಗಿದೆ. ಬೇಸಿಗೆ ಮುಗಿಯುತ್ತಿದ್ದರೂ ಕುಡಿಯುವ ನೀರಿನ ಟೆಂಡರ್‌ ಕರೆಯುವುದಕ್ಕೆ ಕುರುಡರಂತೆ ವರ್ತಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರತಿಯೊಂದು ಕಡೆ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಹೀಗಾಗಿ ಕುಡಿಯುವ ನೀರಿನ ಅನುದಾನ ದುರುಪಯೋಗವಾಗುತ್ತಿದೆ ಎಂದು ಪುರಸಭೆ ಸದಸ್ಯರ ಗಂಭೀರವಾಗಿ ಆರೋಪಿಸಿದ್ದಾರೆ.

ಎಚ್ಚೆತ್ತದಿದ್ದರೆ ಬೀಗ: ಕುಡಿಯುವ ನೀರಿಗೆ ಮೀಸಲಿದ್ದ ಅನುದಾನದ ಟೆಂಡರ್‌ ಅತಿ ಶೀಘ್ರ ಕರೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿಗೆ ಬೀಗ ಹಾಕಿ ತೀವ್ರವಾಗಿ ಪ್ರತಿಭಟಿಸಲಾಗುವುದು ಎಂದು ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.

ಟೆಂಡರ್‌ ಕರೆಯದೇ ಇದ್ದ ಬಗ್ಗೆ ಪರಿಶೀಲಿಸಲಾಗುವುದು. ಅನುದಾನ ಇದ್ದರೆ ಅತಿ ಶೀಘ್ರದಲ್ಲಿ ಟೆಂಡರ್‌ ಪ್ರಕ್ರಿಯೆಗೆ ಅನುಮೋದನೆ ನೀಡಲಾಗುವುದು.
ಎಂ.ಕುರ್ಮಾರಾವ್‌, ಜಿಲ್ಲಾಧಿಕಾರಿ

ಕುಡಿಯುವ ನೀರಿನ ಯೋಜನೆ ಟೆಂಡರ್‌ ಸಮಸ್ಯೆ ಎರಡು ವರ್ಷದಿಂದ ಕಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ. ಸರ್ಕಾರದ ಅನುದಾನ ಇದ್ದರೂ ಟೆಂಡರ್‌ ಕರೆಯಲು ಸಮಸ್ಯೆಯಾದರೂ ಏನು? ನೀರಿಗಾಗಿ ಜನರು ಪರದಾಡುವಂತಿದೆ. ಸಮಸ್ಯೆ ಕಣ್ಣಿಗೆ ರಾಜಿಸಿದರೂ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ. ಕೂಡಲೇ ಟೆಂಡರ್‌ ಕರೆಯಬೇಕು.
ಶರಣಕುಮಾರ ಸೊಲ್ಲಾಪುರ,
ಪುರಸಭೆ ಸದಸ್ಯ ಕಕ್ಕೇರಾ

ಎಲ್ಲೆಲ್ಲಿ ನೀರಿನ ಸಮಸ್ಯೆ?
1ನೇ ವಾರ್ಡ್‌, 9ನೇ ವಾರ್ಡ್‌, 14ನೇ ವಾರ್ಡ್‌, 16, 17, 20, 21, 23ನೇ ಸೇರಿದಂತೆ ಪ್ರಮುಖ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next