ಕಕ್ಕೇರಾ: ಪಟ್ಟಣದಲ್ಲಿರುವ ಬಸ್ ನಿಲ್ದಾಣ ಹಾಳು ಕೊಂಪೆಯಂತಾಗಿದ್ದು, ಇದ್ದೂ ಇಲ್ಲದಂತಾಗಿದೆ. ಪುರಸಭೆ ಕೇಂದ್ರ ಹೊಂದಿರುವ ಪಟ್ಟಣಕ್ಕೆ ಅಗತ್ಯ ತಕ್ಕಂತೆ ಬಸ್ ನಿಲ್ದಾಣ ಅವಶ್ಯಕತೆ ಇದೆ. ಬೆಳೆಯುತ್ತಿರುವ ಪಟ್ಟಣಕ್ಕೆ ಬಸ್ ನಿಲ್ದಾಣ ಭಾಗ್ಯ ಯಾವಾಗ ಕೂಡಿ ಬರುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ದಿ| ಸಂಸದ ಎ.ವೆಂಕಟೇಶನಾಯಕ ಅವರ ಪ್ರದೇಶಭಿವೃದ್ಧಿ ನಿಧಿಯಲ್ಲಿ 2001-02ನೇ ಸಾಲಿನಲ್ಲಿ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ಕರ್ನಾಟಕ ಭೂ ಸೇನಾ ನಿಗಮದಿಂದ ಪಟ್ಟಣದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಸ್ಥಳ ಕೊರತೆ ಹಾಗೂ ಕೆಲವೊಂದು ಅಡಚಣೆಯಿಂದಾಗಿ ನಿಲ್ದಾಣ ಕಟ್ಟಡ ಸುತ್ತಲು ಮುಳ್ಳು ಕಂಟಿ ಬೆಳೆದು ಹಾಗೇ ಪಾಳು ಬಿದ್ದಿದೆ.
ಈಗಿರುವ ಬಸ್ ನಿಲ್ದಾಣಕ್ಕೆ ಅಗತ್ಯ ಸೌಕರ್ಯ ನೀಡಿ ಸ್ಥಳಾವಕಾಶದೊಂದಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಬೇಕು ಅಥವಾ ನೂತನ ಬಸ್ ನಿಲ್ದಾಣ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಿರುವ ನಿಲ್ದಾಣಕ್ಕೆ ಒಳ ಪ್ರವೇಶಿಸಲು ಗುಣಮಟ್ಟದ ರಸ್ತೆ, ಕುಡಿಯುವ ನೀರಿನ ಟ್ಯಾಂಕ್, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳು ಬಾಕಿ ಉಳಿದಿವೆ. ಹೀಗಾಗಿ ಇಲ್ಲಿಯವರೆಗೂ ಯಾವ ಅಧಿಕಾರಿಗಳು ನಿಲ್ದಾಣದ ಸಮಸ್ಯೆ ಬಗ್ಗೆ ಕಣ್ಣಾಯಿಸಿಲ್ಲ. ಇದರಿಂದ ಸಮಸ್ಯೆ ಎದುರಾಗಿದೆ. ಈಗಿರುವ ನಿಲ್ದಾಣವೇ ಸೂಕ್ತ ಎನಿಸಿದರೆ ಕೂಡಲೇ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬಸ್ ಸೌಕರ್ಯ ಇಲ್ಲ: ನಿಲ್ದಾಣ ಸಮಸ್ಯೆ ಜತೆಗೆ ಬಸ್‌ಗಳ ಕೊರತೆಯೂ ಎದುರಿಸುವಂತಾಗಿದೆ. ಸುತ್ತಲಿನ ಬೆಂಚಿಗಡ್ಡಿ, ಹುಣಸಿಹೊಳೆ, ನಿಂಗಾಪುರ, ಮಂಜಲಾಪುರ, ಹಿರೇಹಳ್ಳ, ಏದಲಭಾವಿ, ಗೋಡಿಹಾಳ ಸೇರಿದಂತೆ ವಿವಿಧ ಗ್ರಾಮದ ಗ್ರಾಮಸ್ಥರು ದೈನಂದಿನ ಕೆಲಸ ಕಾರ್ಯಗಳಿಗಾಗಿ ಖಾಸಗಿ ವಾಹನ ಅಥವಾ ನಡದುಕೊಂಡು ಬರಬೇಕಾಗಿದೆ. ವಿದ್ಯಾರ್ಥಿಗಳಿಗೂ ಕಷ್ಟಕರವಾಗಿ ಪರಿಣಮಿಸಿದೆ.
ಇನ್ನೂ ವ್ಯಾಪರಸ್ಥರು ಸರಕು, ಸಾಗಾಟ, ವ್ಯಾಪಾರಕ್ಕಾಗಿ ವಿಜಯಪುರ, ನಾರಾಯಣಪುರ, ರಾಯಚೂರು, ಸುರಪುರ, ಲಿಂಗಸುಗೂರಿಗೆ ತೆರಳಬೇಕಾದರೆ ಖಾಸಗಿ ವಾಹನಗಳಲ್ಲಿಯೇ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರಾಯಚೂರು ಘಟಕದ ರಾಯಚೂರು-ವಿಜಯಪುರ, ತಾಳಿಕೋಟಿ-
ರಾಯಚೂರು, ಸೊಲ್ಲಾಪುರ-ರಾಯಚೂರು ಬಸ್‌ಗಳು ಇಲ್ಲಿ ಸಂಚರಿಸುವುದು ಬಿಟ್ಟರೆ ಇನ್ನುಳಿದಂತೆ ಬಸ್‌ಗಳೇ ಇಲ್ಲ. ಸುರಪುರದಲ್ಲಿ ಸಾರಿಗೆ ಘಟಕ ಇದ್ದರೂ ಇಲ್ಲದಂತಾಗಿದೆ. ಹೀಗಾಗಿ ಪಟ್ಟಣ ಹಲವು ಸೌಲಭ್ಯಗಳಿಂದ ವಂಚಿತಗೊಳ್ಳಬೇಕಾಗಿದೆ. ಕನಿಷ್ಠ ಇಪತ್ತು ನಿಮಿಷಕ್ಕೊಂದು ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಅನುಕೂಲವಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.