ಕೊಡಗು ತನ್ನದೇ ಆದ ಸಾಂಸ್ಕೃತಿಕ ವಿಶಿಷ್ಟತೆಯನ್ನು ಹೊಂದಿರುವ ಜಿಲ್ಲೆ. ಈ ಜಿಲ್ಲೆಯಲ್ಲಿ ಕಕ್ಕಡ ಪದಿನೆಟ್ ಸಂಭ್ರಮ ಮನೆಮಾಡಿದೆ. ಪ್ರತೀ ಮನೆಮನೆಯಲ್ಲೂ ಕಕ್ಕಡದ ವಿಶೇಷ ಖಾದ್ಯಗಳು ಘಮ ಘಮಿಸುತ್ತಿದೆ. ಆಷಾಢ ತಿಂಗಳು ಶುರು ಎಂದಕ್ಷಣ ಎಲ್ಲೆಲ್ಲೂ ಕಕ್ಕಡ ಪದಿನೆಟ್ ವಿಶೇಷ ಆಚರಣೆ ನಡೆಯಲಿದೆ.
ಮಳೆಗಾಲ ಆರಂಭವೆಂದೆಡೆ ಎಷ್ಟೋ ಆರೋಗ್ಯಕರ ಖಾದ್ಯಗಳಿಗೆ ಜೀವ ಬಂದಂತೆ.ಕೊಡಗಿನ ಮಳೆ ಎಂದರೆ ಒಮ್ಮೆ ಚಳಿಯ ಸ್ಪರ್ಶ ಜುಮ್ಮ್ ಎನ್ನುತ್ತದೆ. ಇಂತಹ ಮಳೆಗಾಲದ ಶೀತ ವಾತಾವರಣದಿಂದ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಕಕ್ಕಡದ ವಿವಿಧ ಖಾದ್ಯದ ರುಚಿ ಸವಿಯಲಾಗುತ್ತದೆ. ಇದರೊಂದಿಗೆ ಕೊಡಗಿನ ಮಳೆಗಾಲದ ವಿಶೇಷ ತಿನಿಸುಗಳಾದ ಮರ ಕೆಸದಿಂದ ತಯಾರಿಸಿದ ಪತ್ರೊಡೆ, ಹಲಸಿನ ಬೀಜದ ಕಟ್ಲೇಟ್, ಪ್ಯಾಶನ್ ಫೂ›ಟ್ ಬೀಜಗಳ ಉಪ್ಪಿನಕಾಯಿ, ಕಣಿಲೆ ಸಾರು, ಏಡಿ ಫ್ರೈ, ಅಕ್ಕಿರೊಟ್ಟಿ, ಪೋರ್ಕ್ ಕರಿ, ಕೋಲೆ ಪುಟ್ಟು, ಹಲಸಿನ ಬೀಜದ ಚಟ್ನಿ, ನಾಟಿ ಕೋಳಿ ಸಾರು, ನಾಟಿ ಕೋಳಿಯ ಕಬಾಬ…, ಕಕ್ಕಡದ ಖಾದ್ಯ ….. ಹೀಗೆ ಹತ್ತು ಹಲವು ಬಗೆಯ ಖಾದ್ಯಗಳನ್ನು ತಯಾರಿಸಿ ಕಕ್ಕಡ ಪದಿನೆಟ್ ಸಂಭ್ರಮಾಚಾರಣೆಯನ್ನು ಆಚರಿಸಲಾಗುತ್ತದೆ.
ಆಚರಣೆಯ ವಿಶೇಷವೆಂದರೆ, ಕಕ್ಕಡ ಆರಂಭವಾದ ದಿನದಿಂದ 18 ದಿನಗಳವರೆಗೆ ಪ್ರತಿದಿನ ಒಂದೊಂದು ಔಷಧಿಯಂತೆ ಒಟ್ಟು 18 ಔಷಧಗಳು ಈ ಸೊಪ್ಪಿನಲ್ಲಿ ಅಡಕವಾಗುತ್ತದೆ. ಮದ್ದಿನ ಗುಣಗಳನ್ನು ಹೊಂದಿರುವ ಆಟಿ ಸೊಪ್ಪಿನ ರಸದಿಂದ ಹಲವು ಬಗೆಯ ಹಲವಾರು ತಿನಿಸುಗಳನ್ನು ತಯಾರಿಸಲಾಗುತ್ತದೆ.ಮದ್ದು ಸೊಪ್ಪು ಎಂದೇ ಹೆಸಾರಾಗಿರುವ ಕೊಡಗಿನ ಆಟಿ ಸೊಪ್ಪು ಕಡು ನೇರಳೆ ಬಣ್ಣದಲ್ಲಿ ಕೂಡಿರುತ್ತದೆ. ಸೊಪ್ಪಿನ ಸುಗಂಧವು ಊರನ್ನೇ ಪರಿಮಳಗೊಳಿಸುತ್ತದೆ. ದಿನ ಕಳೆದಂತೆ ಸೊಪ್ಪಿನ ಸಾರವು ಕಡು ನೇರಳೆ ಬಣ್ಣದಿಂದ ತೆಳು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಸುಗಂಧವು ಕಣ್ಮರೆಯಾಗುತ್ತದೆ. ಹಲವಾರು ಔಷಧ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪು ಕೊಡಗಿನ ಜನತೆಗೆ ವರವಾಗಿದೆ ಹಾಗೂ ವಿಶಿಷ್ಟ ಸ್ಥಾನ ಪಡೆದಿದೆ.
-ಕೀರ್ತನ ಒಕ್ಕಲಿಗ ಬೆಂಬಳೂರು
ವಿವೇಕಾನಂದ ಕಾಲೇಜು ಪುತ್ತೂರು